ಬಹುದಿನಗಳಿಂದ ಕನ್ನಡದಲ್ಲಿ ಲೇಖನ ಬರೆಯಬೇಕೆಂಬ ಕನಸನ್ನು ಈ ಯುಗಾದಿಯ ಶುಭದಿನದಂದು ನನಸಾಗಿಸುತ್ತಿದೇನೆ,ಈ ಪುಟ್ಟ ಲೇಖನವನ್ನು ಓದಿ ಸೂಕ್ತ ಸಲಹೆ ನೀಡಿ. 
"ಯುಗಾದಿ ಇಂದ ಶುರುವಾಗಲಿ ಭರವಸೆಯ  ಹೊಸ ಪರ್ವ":

ಯುಗಾದಿ ಹಬ್ಬ ಎಂದಾಗ ನಮಗೆ ನೆನಪಾಗುವುದು "ಬೇವು  ಹಾಗೂ  ಬೆಲ್ಲ",ನಮ್ಮ ಪೂರ್ವಜರು ಆಚರಿಸುತ್ತಿದ್ದ  ಬಹುತೇಕ ಹಬ್ಬಗಳಿಗೆ ತನ್ನದೇ ಆದ ವೈಜ್ಞಾನಿಕ ಮಹತ್ವ ಇರುತ್ತಿತ್ತು,ಜೀವನದಲ್ಲಿ ಕಷ್ಟ ಹಾಗೂ  ಸುಖಗಳನ್ನು ಸಮವಾಗಿ ಸ್ವೀಕರಿಸಬೇಕೆಂಬ ಉದಾತ್ತ ಧ್ಯೇಯದೊಂದಿಗೆ ಯುಗಾದಿ ಹಬ್ಬವನ್ನು ತಲೆ ತಲಾಂತರದಿಂದ ಆಚರಿಸಿಕೊಂಡು ಬರಲಾಗುತ್ತಿದೆ,ನಮ್ಮೆಲ್ಲರ ಅನ್ನದಾತರಾದ "ನೇಗಿಲ ಯೋಗಿ"ಕೃಷಿಕರಿಗೂ ಸಹ ಈ ಹಬ್ಬ ಒಂದು ರೀತಿಯ ದಿಕ್ಸೂಚಿಯೇ ಆಗಿದೆ,ಈ ಹಬ್ಬದ ನಂತರ ಕೃಷಿಯ ಚಟುವಟಿಕೆಗಳು ಮತ್ತಷ್ಟು ಚುರುಕಾಗುತ್ತದೆ,ಮಳೆಯೇ ಇಲ್ಲದ ಈಗಿನ ಪರಿಸ್ಥಿತಿ ಮಾಯವಾಗಿ ಉತ್ತಮ ಮಳೆ ಬೆಳೆ ಆದರೆ ಅದು ನಮ್ಮ ಅದೃಷ್ಟ,ಹೆಚ್ಚೆಚ್ಚು ಸಸಿ ನೆಡುವ ಅಭಿಯಾನದಿಂದ ಮಾತ್ರ ಅದು ಸಾಧ್ಯ,ಆದರೂ ಸಹ ಯುಗಾದಿ ಹಬ್ಬದ ಮುನ್ನ ಹಾಗೂ ತರುವಾಯ ಮಳೆಯಾಗುವುದು ಪ್ರತೀತಿ.
ಬರೀ ಕರ್ನಾಟಕವಷ್ಟೇ ಅಲ್ಲದೆ ಭಾರತದ ವಿವಿಧ ಭಾಗಗಳಲ್ಲಿ "ಚೈತ್ರ ಮಾಸ,ಶುಕ್ಲ ಪಕ್ಷ"ದಂದು ಆಯಾ ನೆಲದ ಸಂಸ್ಕೃತಿಗೆ ಅನುಗುಣವಾಗಿ  ಯುಗಾದಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ ,ಕರ್ನಾಟಕ ಹಾಗೂ ಆಂಧ್ರಪ್ರದೇಶದಲ್ಲಿ "ಚಾಂದ್ರಮಾನ" ಯುಗಾದಿ ಆಚರಿಸಲ್ಪಟ್ಟರೆ ತಮಿಳುನಾಡು ಮತ್ತು ಕೇರಳದಲ್ಲಿ "ಸೌರಮಾನ" ಯುಗಾದಿಯನ್ನು ಆಚರಿಸಲಾಗುತ್ತದೆ,'ಭಾರತೀಯ ಸಂಸ್ಕೃತಿ'ಯಲ್ಲಿ ಯುಗಾದಿ ಹಬ್ಬವು ನೂತನ ಸಂವತ್ಸರವನ್ನು ಬರಮಾಡಿಕೊಳ್ಳುವ "ಅರ್ಥಪೂರ್ಣ" ಆಚರಣೆಯೇ ಆಗಿದೆ,ಈ ಹಬ್ಬದ ಮೂಲಕ ಶುರುವಾಗುವ ನೂತನ ಸದ್ವಿಚಾರಗಳ ಕ್ರಾಂತಿ ಭವಿಷ್ಯದ ಉನ್ನತಿಗೆ ಬುನಾದಿ ಆಗಿರುವುದು ಸಂತಸ ತರುವ ಸಂಗತಿಯೇ ಆಗಿ ಪರಿಣಮಿಸುತ್ತದೆ.  

ಈ ಋತುವಿನಲ್ಲಿ "ಹಳೆ" ಎಲೆಗಳೆಲ್ಲಾ  ಉದುರಿ "ಹೊಸ" ಎಲೆಗಳು ಚಿಗುರುವಂತೆ ನಮ್ಮಲಿರುವ  ಕೆಲ ಕೆಟ್ಟ ಗುಣಗಳು ಹಳೆ ಎಲೆಗಳಂತೆ ಉದುರಿ, ಉತ್ತಮ ಯೋಚನೆಗಳು ಹೊಸ ಎಲೆಗಳಾಗಿ ಚಿಗುರಿ,ನಮ್ಮನ್ನು ಸಂಪೂರ್ಣವಾಗಿ ಆವರಿಸಲಿ ಎಂದು  ಆ ಭಗವಂತನಲ್ಲಿ ಪ್ರಾರ್ಥಿಸೋಣ. ಹೊಸ ವರ್ಷದ ದಿನ ನಾವು ಆರಂಭಿಸುವ ಒಳ್ಳೆಯ ಕೆಲಸಗಳು ದಿನದಿಂದ ದಿನಕ್ಕೆ, ವಾರದಿಂದ ವಾರಕ್ಕೆ,ತಿಂಗಳಿಂದ ತಿಂಗಳಿಗೆ ದ್ವಿಗುಣವಾಗಿ ಇತರರ ಬಾಳಿನ ಅವಿಭಾಜ್ಯ ಭಾಗವಾಗಿ ಇನ್ನಷ್ಟು  ಜನರನ್ನು ಪ್ರೇರೇಪಿಸುವಂತಾಗುವುದು ನಿಜಕ್ಕೂ ಹೆಮ್ಮೆ ಪಡುವಂತಹ ವಿಷಯ,ಕಳೆದ ವರ್ಷ ಕೆಲ ಸಂಗತಿಗಳನ್ನು ಅನುಷ್ಠ್ಠಾನ ಮಾಡಲ್ಲಿಲವೆಂದು ವ್ಯಥೆ ಪಡುವುದಕ್ಕಿಂತ ಈ ವರ್ಷ "ಧೃಢ ಸಂಕಲ್ಪ"ದಿಂದ ಹೊಸ ಯೋಜನೆಗಳೊಂದಿಗೆ ನೆನೆಗುದಿಗೆ ಬಿದ್ದಿರುವ ಬಾಕಿ ಸಂಗತಿಗಳನ್ನು ಸಹ ಕಾರ್ಯರೂಪಕ್ಕೆ ತರೋಣ.

ಸ್ವಾತಂತ್ರ ನಂತರದಲ್ಲಿ  ಸಾಕಷ್ಟು ಬದಲಾವಣೆಗಳನ್ನು ಕಂಡಿರುವ ಭಾರತ ಕಳೆದ ಕೆಲ ವರ್ಷಗಳಿಂದ ಅಭಿವೃದ್ಧಿ ಪಥದಲ್ಲಿ ವೇಗವಾಗಿ ಚಲಿಸುತ್ತಿದೆ,'ಡಿಜಿಟಲ್ ಇಂಡಿಯಾ','ಸ್ವಚ್ಛ ಭಾರತ' ಹಾಗೂ  'ಮೇಕ್ ಇನ್ ಇಂಡಿಯಾ'ದಂತಹ ದೂರದೃಷ್ಠಿಯುಳ್ಳ ಯೋಜನೆಗಳು ದಿನೇದಿನೇ ಜನಮಾನಸದಲ್ಲಿ ಅಚ್ಚಾಗಿ ಉಳಿಯುತ್ತಿದೆ,ಈ ಯುಗಾದಿ ಹಬ್ಬದ ವಿಶೇಷ ದಿನದಂದು ಪ್ರತಿಯೊಬ್ಬ ಭಾರತೀಯ ಪ್ರಜೆಯು "ನವ ಭಾರತ" ನಿರ್ಮಾಣಕ್ಕೆ ಸಂಕಲ್ಪ ತೊಟ್ಟರೆ ಕನಿಷ್ಠ ಪಕ್ಷ ೨೦೨೨ಕ್ಕೆ ಭಾರತ "ಸ್ವರಾಜ್ಯದಿಂದ ಸುರಾಜ್ಯ" ಆಗುವುದು ಖಚಿತ. ಈ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯ ಪ್ರವೃತ್ತರಾದರೆ ಕಠಿಣವಾದ ಸಾಧನೆಯ ಹಾದಿ ಕೂಡ  ಸುಗಮವಾಗಲಿದೆ. 
"ಶತಾಯುರ್ ವಜ್ರ ದೇಹಾಯ ಸರ್ವ ಸಂಪತ್ಕರಾಯಚ ಸರ್ವಾರಿಷ್ಟ ವಿನಾಶಾಯ ನಿಂಬಕದಳ ಭಕ್ಷಣಂ" (ನೂರು ವರ್ಷ ಆಯಸ್ಸು,ವಜ್ರದಂಥ ದೇಹ,ಎಲ್ಲಾ ಸಂಪತ್ತುಗಳು ಕೈಗೆ ಬರುವುದು,ಎಲ್ಲಾ ಕೆಡುಕುಗಳು ವಿನಾಶ,ಬೇವು ಬೆಲ್ಲ ಭಕ್ಷಣೆಯಿಂದ ಇವೆಲ್ಲ ಸಿಗುತ್ತದೆ) ಈ ಶ್ಲೋಕ ಪಠಿಸುವ ಮೂಲಕ ಬೇವು ಬೆಲ್ಲವನ್ನು ಸವಿಯೋಣ,ಸರ್ವರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ವಿಶ್ವದೆಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಯೋಗ"

ದೀಪಾವಳಿ,ಶ್ರೀ ಕೃಷ್ಣ ಜನ್ಮಾಷ್ಟಮಿ,ಕಾಳಿ ಪೂಜೆ ಹಾಗೂ ಗಣೇಶ ಚತುರ್ಥಿ ಆಚರಣೆಗೇಕೆ ವಿರೋಧ ??

ರಾಷ್ಟ್ರಗೀತೆ ಪ್ರಸಾರವಾಗುವ ವೇಳೆ ಎದ್ದು ನಿಂತು ಗೌರವಿಸುವುದನ್ನು ಸಹ ಹೇಳಿಕೊಡಬೇಕೆ ಸ್ವಾಮಿ ???