ಪಲ್ಲವಿ ಅನುಪಲ್ಲವಿ ಇಂದ ಕಾಟ್ರು ವೆಳಿಯಿಡೈ ವರೆಗಿನ ಮಣಿ"ರತ್ನಂ" ರ ಸಿನಿಪಯಣ

ಪಲ್ಲವಿ ಅನುಪಲ್ಲವಿ ಇಂದ ಕಾಟ್ರು ವೆಳಿಯಿಡೈ ವರೆಗಿನ ಮಣಿ"ರತ್ನಂ" ರ ಸಿನಿಪಯಣ 

೮೦ ರ ದಶಕದಲ್ಲಿ "ನಗುವ ನಯನ ಮಧುರ" ಹಾಗೂ "ನಗು ಎಂದಿದೆ" ಎಂಬ ಸುಮಧುರ ಗೀತೆಗಳಿಂದ ಪ್ರಖ್ಯಾತಿ ಆಗಿದ್ದ ಪಲ್ಲವಿ ಅನುಪಲ್ಲವಿ ಎಂಬ ರಾಜ್ಯ ಪ್ರಶಸ್ತಿ ವಿಜೇತ ಚಿತ್ರವನ್ನು ನಿರ್ದೇಶಿಸಿದ್ದು ಮಣಿರತ್ನಂ ಎಂಬ ಕ್ರಿಯಾತ್ಮಕ ನಿರ್ದೇಶಕ,ಚಿತ್ರರಂಗದೊಂದಿಗೆ ಗುರುತಿಸಿಕೊಂಡಿದ್ದ ಕುಟುಂಬದಲ್ಲಿ ಜನಿಸಿದ್ದರೂ ಸಹ  ಆರಂಭಿಕ ದಿನಗಳಲ್ಲಿ ಚಿತ್ರರಂಗದ ನಿಕಟ ಸಂಪರ್ಕ ಇರಲಿಲ್ಲ,ಸಣ್ಣ ಕಥೆಯ ಎಳೆಯೊಂದಿಂಗೆ ಕನ್ನಡ ಚಿತ್ರರಂಗ ಪ್ರವೇಶಿಸಿದ ಮಣಿರತ್ನಂ ಸ್ನೇಹಿತರೊಡಗೂಡಿ ಪಲ್ಲವಿ ಅನುಪಲ್ಲವಿ ಚಿತ್ರವನ್ನು ತೆರೆ ಮೇಲೆ ತರುವಲ್ಲಿ ಯಶಸ್ವಿಯಾದರು,ನಂತರ ತೆರೆಕಂಡ ಕೆಲ ಚಿತ್ರಗಳು ಅಷ್ಟೊಂದು ಯಶಸ್ವಿ ಆಗದ ಕರಣ ಕೆಲ ಕಾಲ ತೆರೆ ಮರೆಯಾದರು,ಮಣಿರತ್ನಂಗೆ ಮತ್ತೆ ಯಶಸ್ಸು ತಂದು ಕೊಟ್ಟ ಚಿತ್ರವೇ "ಮೌನರಾಗಂ"(೧೯೮೬),ಆಗಿನ ಕಾಲದ ವಿವಾಹ ಪದ್ದತಿಯ ಮಹತ್ವ ಸಾರಿದ್ದ ಈ ಚಿತ್ರದ ಹಾಡುಗಳು ಎಲ್ಲರನ್ನು ಮೋಡಿ ಮಾಡಿತ್ತು,ಚಿತ್ರದ ನಾಯಕಿ ತನ್ನ ಪೋಷಕರ ಒತ್ತಾಯಕ್ಕೆ ಮಣಿದು ಒಲ್ಲದ ಮನಸ್ಸಿನಿಂದ ಮತ್ತೋರ್ವನನ್ನು ಮದುವೆಯಾಗುತ್ತಾಳೆ,ತನ್ನ ಹಳೆಯ ಪ್ರೇಮ ವೈಫಲ್ಯನ್ನು ನೆನೆದು ತನ್ನನ್ನು ಪ್ರೀತಿಸುವ ಗಂಡನನ್ನು ದ್ವೇಷಿಸಿ ಆತನಿಂದ ವಿವಾಹ ವಿಚ್ಛೇದನಕ ಪಡೆಯಲು ಸಹ ಸಿದ್ಧಳಾಗಿರುತ್ತಾಳೆ,ಕೊನೆಗೆ ಸಂಬಂಧದ ಮಹತ್ವ ಅರಿವಾಗಿ ಗಂಡನೊಡನೆ ಬದಕುವಂತಾಗುವುದು ಈ ಚಿತ್ರದ ಸಾರ.ಇತ್ತೀಚೆಗೆ ತೆರೆಕಂಡ ಓಕೆ ಕಣ್ಮಣಿ ಚಿತ್ರ ಈಗಿನ ಕಾಲದ ಪ್ರೇಮ ವಿವಾಹದದ ಬಗ್ಗೆ ಬೆಳಕು ಚೆಲ್ಲುತ್ತದೆ,ಕಾಲಘಟ್ಟಕ್ಕೆ ತಕ್ಕಂತೆ ತನ್ನನ್ನು ಬದಲಿಸಿಕೊಂಡ ಮಣಿರತ್ನಂ ಈ ವಿಷಯಕ್ಕಾಗಿಯೇ ಇಂದಿನ ಯುವ ಜನತೆಗೂ ಸಹ ಅಚ್ಚು ಮೆಚ್ಚು, ಭೂಗತ ಲೋಕದ ಡಾನ್ ಕುರಿತಾದ "ನಾಯಗನ್" ಚಿತ್ರ ೧೯೮೭ ರಲ್ಲಿ ತೆರೆಕಂಡಿತು,ಗಾಡ್ ಫಾದರ್ ಚಿತ್ರದ ಪ್ರೇರಣೆಯಿಂದ ಮೂಡಿಬಂದ ಚಿತ್ರ ಹಲವು ರಾಷ್ಟ್ರ ಪ್ರಶಸ್ತಿಗೆ ಬಾಜನವಾಯಿತು,ಕಮಲ್ ಹಾಸನ್ ನಟಿಸಿದ ಅತ್ಯುತ್ತಮ ಚಿತ್ರಗಳಲ್ಲಿ ಈ ಚಿತ್ರಕ್ಕೆ ಅಗ್ರಸ್ಥಾನ ದೊರಕಿರುತ್ತದೆ,ಟೈಮ್ಸ್ ಪ್ರಕಟಿಸಿದ ಸಾರ್ವಕಾಲಿಕ ೧೦೦ ಅತ್ಯುತ್ತಮ ಚಿತ್ರಗಳ ಪಟ್ಟಿಗೆ ಈ ಚಿತ್ರ ಸೇರಿದೆ,೧೯೯೧ ರಲ್ಲಿ ತೆರೆಕಂಡ "ದಳಪತಿ" ಚಿತ್ರ ಇಬ್ಬರು ಸ್ನೇಹಿತರ ನಡುವಿನ ಸಂಬಂಧದ ಕುರಿತಾಗಿತ್ತು,ಇಳಯರಾಜ ಸಂಯೋಜಿಸಿದ್ದ ಹಾಡುಗಳು ಎಲ್ಲರ ಕಿವಿಗಳಲ್ಲೂ ಗುನುಗುನಿಸಿತಿತ್ತು,ಒಬ್ಬ ನಟನಾಗಿ ರಜನಿಕಾಂತ್ ಪಾಲಿಗೆ ಈ ಚಿತ್ರ ಇಂದಿಗೂ ಸಹ ಅತ್ಯುತ್ತಮ ಚಿತ್ರವಾಗಿಯೇ ಉಳಿದಿದೆ.ಭಯೋತ್ಪಾದಕರ ಕರಾಳ ಮುಖವನ್ನು ತೆರೆದಿಟ್ಟ 'ರೋಜಾ' ಚಿತ್ರ ಉಳಿದ ಚಿತ್ರಗಳಿಗಿಂತ ಭಿನ್ನವಾಗಿಯೇ ಮೂಡಿಬಂದಿತ್ತು,ಏ ಆರ್ ರೆಹಮಾನ್ ಎಂಬ ಜಗದ್ವಿಖ್ಯಾತ ಸಂಗೀತ ನಿರ್ದೇಶಕ ಈ ಚಿತ್ರದ ಮೂಲಕವೇ  ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು,ಈ ಚಿತ್ರ ಬಿಡುಗಡೆಯಾಗಿ ಇಂದಿಗೆ ೨೫ ವರ್ಷಗಳೇ ಆಗಿದೆ,ರೋಜಾ ಮೂಲಕ ಒಂದಾದ ಮಣಿರತ್ನಂ-ರೆಹಮಾನ್ ಜೋಡಿ ಇತ್ತೀಚೆಗೆ ಬಿಡುಗಡೆಯಾದ "ಕಾಟ್ರು ವೆಳಿಯಿಡೈ"ಚಿತ್ರದ ಹಾಡುಗಳ ಮೂಲಕ ಎಲ್ಲರ ಮನೆ ಮಾತಾಗಿದೆ.ರೋಜಾ ನಂತರ ಬಿಡುಗಡೆಯಾದ ಬಾಂಬೆ ಚಿತ್ರ ಆಗಿನ ದಿನಗಳಲ್ಲಿ ಸೂಕ್ಷ್ಮ ಸಂಗತಿಯಾಗಿದ್ದ ಧರ್ಮ ಸಹಿಷ್ಣುತೆಯ ಕುರಿತಾಗಿತ್ತು,ಸಿನಿಮಾಟೋಗ್ರಫಿಗೆ ಹೆಚ್ಚು ಒತ್ತು ಕೊಡುತ್ತಿದ್ದ ಮಣಿರತ್ನಂ ನುರಿತ ತಂತ್ರಜ್ಞರಿಂದ ಅತ್ತ್ಯುತ್ತಮ ಕೆಲಸ ಹೊರ ತೆಗೆಯುವಲ್ಲಿ ನಿಸ್ಸೀಮ,ಮಣಿರತ್ನಂ ನಿರ್ದೇಶನದಲ್ಲಿ ಬಾಲು ಮಹೇಂದ್ರ,ಪಿ ಸಿ ಶ್ರೀರಾಮ್,ಸಂತೋಷ್ ಶಿವನ್,ರಾಜೀವ್ ಮೆನನ್ ಹಾಗೂ ರವಿ ವರ್ಮನ್ ರಂತಹ ದಿಗ್ಗಜರು ಚಿತ್ರಿಸಿದ ಕಣ್ಮನ ಸೆಳೆಯುವ ದೃಶ್ಯಗಳು ಉತ್ಕ್ರಷ್ಟ ಗುಣಮಟ್ಟದ್ದಾಗಿರುತ್ತದೆ. 
ಅಲ್ಲಿಯವರೆಗೂ ಪ್ರೇಮಕಥೆಗಳನ್ನು ಹೆಚ್ಚು ನಿರ್ದೇಶಿಸುತ್ತಿದ್ದ ಮಣಿರತ್ನಂ "ಇರುವರ್" ಚಿತ್ರದ ಮೂಲಕ ರಾಜಕೀಯ ಕಥಾಹಂದರವುಳ್ಳ ಚಿತ್ರವನ್ನು ತೆರೆಮೇಲೆ ತಂದರು,ಮೋಹನ್ ಲಾಲ್,ಪ್ರಕಾಶ್ ರೈ ಹಾಗೂ ಐಶ್ವರ್ಯ ರೈ ಮುಖ್ಯಭೂಮಿಕೆಯಲ್ಲಿದ್ದ ಈ ಚಿತ್ರ ಚಿತ್ರರಂಗದಲ್ಲಿ ಸಂಚಲನವನ್ನೇ ಮೂಡಿಸಿತ್ತು,ಈ ಚಿತ್ರ ದ್ರಾವಿಡ ಪಕ್ಷದ ಮುಖಂಡರಾದ ಕರುಣಾನಿಧಿ  ಹಾಗೂ ಎಂ ಜಿ ಆರ್ ರ ರಾಜಕೀಯ ಏಳು ಬೀಳುಗಳ ಕುರಿತಾಗಿತ್ತೆಂಬುದು ವಿಶೇಷ,ಸಾಮಾಜಿಕ ಹಾಗೂ ರಾಜಕೀಯ ಕಥೆ ಮಿಶ್ರಣದ "ಕಣ್ಣಥಿಲ್ ಮುತ್ತಮ್ ಇಟ್ಟಾಲ್"  ಚಿತ್ರದ ಕಥೆ ತಂದೆ ತಾಯಿ,ಮಗಳು ಹಾಗೂ ಎಲ್ ಟಿ ಟಿ ಇ ನಾಯಕಿಯ ಸುತ್ತ ಸುತ್ತುತ್ತದೆ, ದತ್ತು ಪಡೆದ ಮಗಳಿಗೆ ತನ್ನ ನಿಜವಾದ ಅಮ್ಮನ ಬಗ್ಗೆ ತಿಳಿದಾಗ ಆಗುವ ಭಾವನೆಗಳ ಸಂಘರ್ಷಣೆಯನ್ನು ತೆರೆಯ ಮೇಲೆ ಅಚ್ಚುಕಟ್ಟಾಗಿ ತೋರಿಸಲಾಗಿದೆ.ಪ್ರೀತಿ,ಪ್ರೇಮ ಹಾಗೂ ವಿವಾಹದ ನವಿರಾದ ಎಳೆಯಿಂದ ಎಣೆದ ಮತ್ತೊಂದು ಚಿತ್ರ ಅಲೈಪಾಯುದೆ,ಪ್ರೀತಿಸಿ ವಿವಾಹವಾಗುವ ಪ್ರೇಮಿಗಳ ನಡುವಿನ ಸಣ್ಣ ಸಣ್ಣ ಮನಸ್ತಾಪಗಳ ಪ್ರಸ್ತಾವನೆ ಈ ಚಿತ್ರದ ಮೂಲ ಆಧಾರ. 
ಸಾಮಾಜಿಕ ಬದಲಾವಣೆಗಳಲ್ಲಿ ತೊಡಗಿರುವ ಯುವಕರ ಕುರಿತಾದ ಚಿತ್ರ "ಯುವ",ಕ್ರೂರ ವ್ಯವಸ್ಥೆಯ ವಿರುದ್ಧ ಸಿಡಿದೇಳುವ ಕಥಾ ನಾಯಕ, ನಾಯಕನನ್ನು ಹಿಂಬಾಲಿಸುವ ಯುವ ಪಡೆ, ಖಳನಾಯಕನನ್ನು ಸಮರ್ಥವಾಗಿ ಎದುರಿಸಿ ಯಶಸ್ವಿ ಆಗುವ ನಾಯಕನ ಯಶೋಗಾದೆ,ಈ ಚಿತ್ರದಲ್ಲಿ ನಾಯಕನನ್ನು ಇಷ್ಟಪಡುವ ಪ್ರೇಕ್ಷಕ ಕೆಲವೊಮ್ಮೆ ಖಳನಾಯಕನ್ನು ಇಷ್ಟ ಪಡುವಂತಾಗುತ್ತಾನೆ,ಹಿನ್ನಲೆ ಸಂಗೀತ ಹಾಗೂ ಹಾಡುಗಳು ಇದಕ್ಕೆ ಕಾರಣ.ಒಬ್ಬ ಸಾಮಾನ್ಯ ವ್ಯಕ್ತಿ ಯಶಸ್ವಿ ಉದ್ಯಮಿ ಆಗಿ ರೂಪುಗೊಳ್ಳುವ ಕಥೆಯನ್ನು ಆಧಾರವಾಗಿಟ್ಟುಕೊಂಡು ಚಿತ್ರಿಸಿದ ಚಿತ್ರ 'ಗುರು', ತನ್ನ ಏಳ್ಗೆಗಾಗಿ ವ್ಯಕ್ತಿ ಏನೆಲ್ಲಾ ಮಾಡಬಲ್ಲ,ಮುಳ್ಳನ್ನು ಸಹ ಹೂವಾಗಿ ಪರಿವರ್ತಿಸಬಲ್ಲ ಚಾಣಾಕ್ಷ ಉದ್ಯಮಿಯ ಕಥೆ ತೆರೆಯ ಮೇಲೆ ಅದ್ಬುತವಾಗಿಯೇ ಮೂಡಿಬಂದಿದೆ.ಗುರು ಚಿತ್ರದ ನಂತರ ತೆರೆ ಕಂಡ ರಾವಣ್ ಹಾಗೂ ಕಡಲ್ ಚಿತ್ರಗಳು ವಾಣಿಜ್ಯಾತ್ಮಕ ದೃಷ್ಟಿಯಲ್ಲಿ ಸೋತಿದ್ದರೂ ಆ ಚಿತ್ರದ ಹಾಡುಗಳು ಹಾಗೂ ಸಿನೆಮ್ಯಾಟೋಗ್ರಾಫಿ ಉತ್ತಮ ಗುಣಮಟ್ಟದಾಗಿತ್ತು,ಈ ೩೪ ವರ್ಷಗಳಲ್ಲಿ ಮಣಿರತ್ನಂ ನಿರ್ದೇಶಿಸಿರುವ ಚಿತ್ರಗಳು ೨೫,೨೫ ನೇ ಚಿತ್ರ ಕಾಟ್ರು ವೇಳಿಯಿಡೈ ಈಗಷ್ಟೇ ಬಿಡುಗಡೆ ಆಗಿದ್ದು ಪ್ರೇಕ್ಷಕರನ್ನು ರಂಜಿಸುತ್ತಿದೆ. ಭಾರತ ಚಿತ್ರರಂಗ ಕಂಡ ಅತ್ಯುತ್ತಮ ನಿರ್ದೇಶಕ ಮಣಿರತ್ನಂಗೆ ಶುಭ ಹಾರೈಕೆಗಳು 

ಸುಪ್ರೀತ್ 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ವಿಶ್ವದೆಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಯೋಗ"

ದೀಪಾವಳಿ,ಶ್ರೀ ಕೃಷ್ಣ ಜನ್ಮಾಷ್ಟಮಿ,ಕಾಳಿ ಪೂಜೆ ಹಾಗೂ ಗಣೇಶ ಚತುರ್ಥಿ ಆಚರಣೆಗೇಕೆ ವಿರೋಧ ??

ರಾಷ್ಟ್ರಗೀತೆ ಪ್ರಸಾರವಾಗುವ ವೇಳೆ ಎದ್ದು ನಿಂತು ಗೌರವಿಸುವುದನ್ನು ಸಹ ಹೇಳಿಕೊಡಬೇಕೆ ಸ್ವಾಮಿ ???