"ಇಂಜಿನಿಯರಿಂಗ್ ದಿನಗಳ ರಾಮ ನವಮಿ ಆಚರಣೆಯ ನೆನಪು ಇನ್ನು ಹಚ್ಚ ಹಸಿರಾಗಿಯೇ ಉಳಿದಿದೆ "

"ಇಂಜಿನಿಯರಿಂಗ್ ದಿನಗಳ ರಾಮ ನವಮಿ ಆಚರಣೆಯ ನೆನಪು ಇನ್ನು ಹಚ್ಚ ಹಸಿರಾಗಿಯೇ ಉಳಿದಿದೆ "

ಸ್ವಾತಂತ್ರ ಪೂರ್ವದಲ್ಲಿ ಲೋಕಮಾನ್ಯ 'ಬಾಲ ಗಂಗಾಧರ ತಿಲಕ'ರು ಭಾರತೀಯರನ್ನು ಒಂದುಗೂಡಿಸುವ ಸಲುವಾಗಿ 'ಗಣೇಶ ಉತ್ಸವ'ವನ್ನು ಸಾಮೂಹಿಕವಾಗಿ ಆಚರಿಸಲು ಕರೆಕೊಟ್ಟರು,ಒಡೆದು ಆಳುವ ನೀತಿಯಿಂದ ಪ್ರಸಿದ್ಧರಾಗಿದ್ದ ಬ್ರಿಟಿಷರ ಕುತಂತ್ರದ ಫಲವಾಗಿ ಆ ದಿನಗಳಲ್ಲಿ ಭಾರತೀಯರ ನಡುವೆ ಜಾತಿ ಹಾಗೂ ಧರ್ಮದ ವಿಚಾರವಾಗಿ ದ್ವೇಷದ ಕಿಡಿ ಹೊತ್ತಿ ಉರಿಯುತ್ತಿತ್ತು, ಇದನ್ನು ಮನಗಂಡ ತಿಲಕರು ಮಹಾರಾಷ್ಟ್ರದ ವಿವಿಧೆಡೆ ಎಲ್ಲರನ್ನು ಒಟ್ಟುಗೂಡಿಸಿ ಗಣೇಶ ಉತ್ಸವ ಆಚರಿಸುವ ಮೂಲಕ ನೂತನ ವಿಧದ ಆಚರಣೆಗೆ ನಾಂದಿ ಹಾಡಿದರು,ಗಣೇಶ ಉತ್ಸವದಂತೆಯೇ 'ರಾಮ ನವಮಿ' ಆಚರಣೆಯಲ್ಲಿಯೂ ಸಹ ಅಪಾರ ಜನ ನೆರೆಯುತ್ತಿದ್ದರು.  

ಇಕ್ಷ್ವಾಕು ವಂಶದ,ಅಯೋಧ್ಯಾ ಸಾಮ್ರಾಜ್ಯದ ಮಹಾರಾಜನಾದ 'ದಶರಥ'ನು ಸಂತಾನ ಪ್ರಾಪ್ತಿಗಾಗಿ ಪುತ್ರಕಾಮೇಷ್ಠಿ ಯಜ್ಞವನ್ನು ನೆರವೇರಿಸದನು, ಲೋಕ ಕಲ್ಯಾಣಕ್ಕಾಗಿ ಆಗ ಜನಿಸಿದವನೇ 'ಶ್ರೀ ರಾಮ',ರಾಮಚಂದ್ರನ ಜನ್ಮದಿನವನ್ನು ಕೊಂಡಾಡುವ ಹಬ್ಬವೇ 'ಶ್ರೀ ರಾಮ ನವಮಿ'. ದಶರಥ ಹಾಗೂ ಕೌಸಲ್ಯ ದಂಪತಿಯ ಪುತ್ರನಾದ ರಾಮನು ಚಿಕ್ಕ ವಯಸ್ಸಿನಲ್ಲಿಯೇ ಸಕಲ ವೇದ-ವಿದ್ಯೆಗಳಲ್ಲಿ ಪಾರಂಗತನಾಗಿದ್ದನು. ಅಸುರ ವಂಶದವರಾದ ತಾಟಕಿ,ಸುಬಾಹು ಹಾಗೂ ಮಾರೀಚರು ಯಜ್ಞ ಹಾಗು ಹೋಮಗಳು ನಡೆಯುವಾಗ ಮಾಂಸ ಎಸೆಯುವ ಮೂಲಕ ಋಷಿವೃಂದವನ್ನು ಪೀಡಿಸುತ್ತಿದ್ದರು,ಆಗ 'ವಿಶ್ವಾಮಿತ್ರ'ರು ರಾಕ್ಷಸ ಸಂಹಾರಕ್ಕಾಗಿ ದಶರಥನ ಮೊರೆ ಹೋದರು,ದಶರಥನು ತನ್ನ ೧೪ ವರ್ಷದ ಎಳೆಯ ಮಕ್ಕಳಾದ 'ರಾಮ ಹಾಗೂ ಲಕ್ಷ್ಮಣ'ರನ್ನು ರಾಕ್ಷಸರ ವಿರುದ್ಧ ಸೆಣಸಾಡಲು ವಿಶ್ವಾಮಿತ್ರರೊಂದಿಗೆ ಕಾಡಿಗೆ ಕಳುಹಿಸಿಕೊಟ್ಟನು,ಗುರುಗಳ ಆದೇಶದಂತೆ ರಾಮ ಲಕ್ಷ್ಮಣರು ರಾಕ್ಷಸರನ್ನು ಕೊಂದರು,ಆ ದುಷ್ಟರ ಸಂಹಾರದ ಮೂಲಕ ಮುಂದೆ ಜರುಗಲಿರುವ ಜಗದೋದ್ದಾರದ ಮಹಾಕಾರ್ಯಕ್ಕೆ ಆಗಲೇ ಮುನ್ನುಡಿ ಬರೆದನು. 

'ಜನಕ' ಮಹಾರಾಜನು ಏರ್ಪಡಿಸಿದ್ದ ಸ್ವಯಂವರದಲ್ಲಿ ಸುತ್ತಮುತ್ತ ರಾಜ್ಯದ ಯುವರಾಜರೆಲ್ಲ ಸೇರಿದ್ದರು,ಬೇರೆಲ್ಲ ರಾಜರು ಶಿವಧನುಸ್ಸು ಎತ್ತುವಲ್ಲಿ ವಿಫಲರಾದರು, ಆದರೆ ಅದೇ 'ಶಿವಧನಸ್ಸು'ಎತ್ತಿ ಶ್ರೀ ರಾಮಚಂದ್ರನು ಜಯಶಾಲಿಯಾದನು,ರಾಮನು ಸೀತಾ ದೇವಿಯನ್ನು ಅಗ್ನಿಸಾಕ್ಷಿಯಾಗಿ ವರಿಸಿ ಪತಿಯಾದನು ,'ಪಿತೃವಾಕ್ಯ ಪರಿಪಾಲನೆ', 'ಸತ್ಯನಿಷ್ಠೆ'ಗೆ ಹೆಸರಾಗಿದ್ದ ಶ್ರೀ ರಾಮನು ತನ್ನ ತಂದೆಯ ಮಾತನ್ನು ದೈವವಾಕ್ಯವೆಂಬಂತೆ ಪರಿಗಣಿಸಿ ೧೪ ವರ್ಷಗಳ ಕಾಲ 'ವನವಾಸ'ಕ್ಕೆ ತೆರಳಲು ಅಣಿಯಾದನು,ಸಿಂಹಾಸನದ ಆಸೆ ಹಾಗೂ ಸಕಲ ವೈಭವಗಳ್ಳನು ಅನುಭವಿಸದೆ 'ನಾರಿಮಡಿ' ತೊಟ್ಟು ವನವಾಸಕ್ಕೆ ತೆರಳಿದ್ದು ಆತನ ಸರ್ವಶ್ರೇಷ್ಠ ಗುಣ, ಶ್ರೀ ರಾಮನನ್ನು ಗೌರವಿಸುತ್ತಿದ್ದ ಸೀತಾ ದೇವಿ ಹಾಗೂ ಲಕ್ಷ್ಮಣರೂ ಸಹ ಸರ್ವಸ್ವವನ್ನು ತ್ಯಜಿಸಿ ಕಾಡಿಗೆ ತೆರಳಿದ್ದು ಇತಿಹಾಸ,ಯುವರಾಜನಾದ ರಾಮನನ್ನು ಅತಿಯಾಗಿ ಪ್ರೀತಿಸುತ್ತಿದ್ದ ಅಯೋಧ್ಯೆಯ ಜನಸಾಮಾನ್ಯರು ರಾಮ ಕಾಡಿಗೆ ತೆರಳಿದ ಸಂಗತಿ ತಿಳಿದು ಕಂಬನಿ ಸುರಿಸುವ ಮೂಲಕ ತಮ್ಮ ಅತೃಪ್ತಿ ಹೊರಹಾಕಿದರು, ಆ ಕಾಲಘಟ್ಟದಲ್ಲಿ ಪ್ರಜೆಗಳು ದುಃಖದ ಸಾಗರದಲ್ಲಿ ಮುಳುಗಿದ್ದ ರು,ವನವಾಸ ಶುರು ಮಾಡಿದ ರಾಮ ನಾನಾ ಪರೀಕ್ಷಿಗಳಿಗೆ ಒಳಪಟ್ಟನು,ಅದೆಲ್ಲವನ್ನು ದಾಟಿ ವಿಜಯಿಯಾದನು,ವನವಾಸದ ದಿನಗಳಲ್ಲಿ ರಾಮನಿಗೆ ಗಂಗಾ ನದಿಯನ್ನು ದಾಟಲು ಸಹಾಯ ಮಾಡಿದ ಬೇಡರ ರಾಜ 'ಗುಹ'ನ ಕಥೆ ನಿಜಕ್ಕೂ ಭಾವನಾತ್ಮಕವೇ ಆಗಿದೆ, ರಾಮನನ್ನು ಆರಾಧಿಸುತ್ತಿದ್ದ ಗುಹಾ ತನ್ನ ಆರಾಧ್ಯಧೈವವನ್ನು ಕಂಡಾಗ ಪುಳಕಿತನಾಗುತ್ತಾನೆ,ರಾಮನನ್ನು ಸತ್ಕರಿಸುವ ಮೂಲಕ ತನ್ನ 'ರಾಮಭಕ್ತಿ'ಯನ್ನು ಮೆರೆಯುತ್ತಾನೆ.ರಾಮ ತನ್ನ ರಾಜ್ಯದ ಪ್ರಜೆಗಳೊಂದಿಗೆ ಹೇಗೆ ವ್ಯವಹರಿಸುತ್ತಿದ್ದ ಎಂಬುದು ಈ ಪ್ರಸಂಗದಿಂದ ಜಗಜ್ಜಾಹೀರಾಗಿದೆ. 

ಭರತ ,ಶಬರಿ ಹಾಗು ಅಹಲ್ಯೆಯ ಸರದಿ-  ಅಣ್ಣ ಸರ್ವಸ್ವವನ್ನು  ತ್ಯಜಿಸಿ ಕಾಡಿಗೆ ಹೊರಟ ಸಂಗತಿಯನ್ನು ಕೇಳಿ ದುಃಖತಪ್ತನಾದ 'ಭರತ'ನು ಸಹೋದರನನ್ನು ಹುಡುಕಿಕೊಂಡು ಕಾಡಿಗೆ ತೆರಳುತ್ತಾನೆ, ಇದನ್ನು ತಪ್ಪಾಗಿ ಅರ್ಥೈಸಿಕೊಂಡ ಲಕ್ಷ್ಮಣನು ಭರತನು ರಾಮನ ಮೇಲೆ ಯುದ್ಧ ಸಾರಲು ಬರುತ್ತಿದ್ದಾನೆಂದು ತಿಳಿದು ಕುಪಿತಗೊಳ್ಳುತ್ತಾನೆ ಆದರೆ ಶಾಂತಮಯಿಯಾದ ರಾಮನು ಭರತನನ್ನು ಬರಮಾಡಿಕೊಂಡು ನಡೆದುಹೋಧ ಸಂಗತಿಗಳನ್ನು ವಿವರಿಸುತ್ತಾನೆ,ಭರತನು ಎಷ್ಟೇ ಪ್ರಯತ್ನ ಪಟ್ಟರು ರಾಮನು ಅಯೋಧ್ಯೆಗೆ ಹಿಂದಿರುಗಲು ಒಪ್ಪಲಿಲ್ಲ,ಇದನ್ನು ಅರಿತ ಭರತನು ರಾಮನ 'ಪಾದರಕ್ಷೆ'ಯೊಂದಿಗೆ ಸ್ವಂತ ಸಾಮ್ರಾಜ್ಯಕ್ಕೆ ವಾಪಸಾಗುತ್ತಾನೆ,ಪಾದರಕ್ಷೆಗಳನ್ನು ಸಿಂಹಾಸನದ ಮೇಲಿಟ್ಟು ರಾಜ್ಯಭಾರವನ್ನು ಅರಮನೆಯಿಂದ ಹೊರಗಿನ 'ನಂದಿಗ್ರಾಮ'ದಿಂದಲೇ ಮಾಡುತ್ತಾನೆ, ಇದು ರಾಮನ 'ಸಧ್ಗುಣ' ಹಾಗು ಭರತನ 'ವಿನೀತ' ಭಾವವನ್ನು ತೋರುತ್ತದೆ, ವನವಾಸದಲ್ಲಿ ಅಣ್ಣನ ಜೊತೆ ಸದಾ ಇದ್ದ ಲಕ್ಷ್ಮಣನ 'ಸಹೋದರ ನಿಷ್ಠೆ'ಇನ್ನೂ ಅಧ್ಭುತ,ಅಣ್ಣ ಹಾಗೂ ಅತ್ತಿಗೆಯ ಮಾತನ್ನು ಚಾಚೂತಪ್ಪದೆ ಪಾಲಿಸಿ ಅವರ ಸೇವೆಯಲ್ಲಿ ಸಂತಸವನ್ನು ಕಂಡ ಆದರ್ಶ ವ್ಯಕ್ತಿ ಲಕ್ಷ್ಮಣ.ಶಾಪ ಗ್ರಸ್ತಳಾಗಿದ್ದ 'ಅಹಲ್ಯೆ'ಯನ್ನು ಶಾಪ ಮುಕ್ತಳನ್ನಾಗಿ ಮಾಡಿದ್ದು ಸಹ ಶ್ರೀ ರಾಮಚಂದ್ರನೇ,ತನ್ನ ಚಿಕ್ಕ ವಯಸ್ಸಿನಲ್ಲೇ ಇಂತಹ ಪಾವಡ ಮಾಡಿದ ಕೌಸಲ್ಯಾ ಪುತ್ರನಾದ ರಾಮನು ದೈವ ಸ್ವರೂಪಿಯೇ ಆಗಿದ್ದನು.ರಾಮನ ಪರಮ ಭಕ್ತೆಯಾದ 'ಶಬರಿ'ಗೆ ಕೇವಲ ದರ್ಶನ ಮಾತ್ರದಿಂದ ಜೀವನವನ್ನು ಪಾವನವಾಗಿಸಿದ ಶ್ರೀ ರಾಮನು ಕರುಣಾಮೂರ್ತಿಯೂ ಹೌದು.ಸ್ವಾಮಿನಿಷ್ಠ ಭಕ್ತರಿಗಾಗಿ ಏನನ್ನಾದರೂ ಮಾಡಬಲ್ಲ ಶ್ರೀ ರಾಮಚಂದ್ರನ ಇನ್ನೊಂದು ಮಹತ್ತರವಾದ ಗುಣ ಇಲ್ಲಿ ಅನಾವರಣವಾಗುತ್ತದೆ.  

ಕಿಷ್ಕಿಂದ ಸಾಮ್ರಾಜ್ಯದ ದೊರೆಗಳಾದ 'ವಾಲಿ ಹಾಗೂ ಸುಗ್ರೀವ'ರ ನಡುವಿನ ಯುದ್ಧದಲ್ಲಿ ನ್ಯಾಯದ ಪರ ನಿಂತ ಶ್ರೀ ರಾಮನು 'ದುಷ್ಟ' ಅಣ್ಣನನ್ನು ಸಂಹರಿಸಿ 'ಶಿಷ್ಟ' ತಮ್ಮನನ್ನು ರಕ್ಷಿಸಿದನು,ಸುಗ್ರೀವ ಮುಂದಿನ ದಿನಗಳಲ್ಲಿ ರಾಮನ ಜೊತೆಗೂಡಿ ರಾವಣನ ವಿರುದ್ಧ ಹೋರಾಡುವಲ್ಲಿ ನೆರವಾದನು, ರಾಮನ ಪರಮ ಭಕ್ತನಾದ 'ಹನುಮಂತ'ನು ತನ್ನ ಜೀವನವನ್ನು ರಾಮನ ಸೇವೆಗಾಗಿಯೇ ಮುಡಿಪಿಟ್ಟನು,ಲಂಕೆಗೆ ಲಗ್ಗೆ ಇಟ್ಟು ರಾವಣ ಸಾಮ್ರಾಜ್ಯವನ್ನೇ ಸುಟ್ಟನು,ರಾವಣನ ತಮ್ಮನಾದ 'ವಿಭೀಷಣ'ನು ಸಹ ರಾಮನ ಪಾಳಯವನ್ನು ಸೇರಿ 'ಧರ್ಮ ರಕ್ಷಣೆ' ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದನು, ರಾಮನ ಸತ್ಯನಿಷ್ಠೆ, ಪ್ರಾಮಾಣಿಕತೆ,ಪಿತೃವಾಕ್ಯ ಪರಿಪಾಲನೆ,ವಾತ್ಸಲ್ಯಮಯಿ ಗುಣಗಳಿಗೆ ಮಾರಿ ಹೋಗದವರು ಎಲ್ಲೂ ಇಲ್ಲ.ರಾಮನ ಗುಣಗಾನ ಮಾಡುತ್ತಾ ಹೋದರೆ ಸಾಲುಗಳು ಲೆಕ್ಕಕ್ಕೆ ಸಿಕ್ಕದ ಹಾಗೆ ಹೆಚ್ಚುತ್ತಾ ಹೋಗುತ್ತದೆ,ಅನಾಧಿ ಕಾಲದಿಂದಲೂ ನಮ್ಮ ನಾಡಿನಲ್ಲಿ ರಾಮ ನವಮಿ ಹಬ್ಬವನ್ನು ರಾಮ ಮಂದಿರಗಳಲ್ಲಿ, ದೇವಾಲಯಗಳಲ್ಲಿ, ವಿವಿಧ ಸಂಸ್ಥೆಗಳಲ್ಲಿ,ಬೀದಿ ಬದಿಯ ಚೌಕಗಳಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ,ರಾಮನಾಮ ಜಪ,ಸಂಗೀತ ಕಛೇರಿ,ಮಜ್ಜಿಗೆ,ಪಾನಕ ಹಾಗೂ ಕೋಸಂಬರಿ ವಿತರಣೆ ರಾಮ ನವಮಿಯ ವಿಶೇಷ .ಕಡು ಬಿಸಿಲಿನಲ್ಲಿ ಭಕ್ತರಿಗೆ ಆರೋಗ್ಯಕ್ಕೆ ಹಿತವಾದ ಹಾಗೂ ತಂಪಾದ ಆಹಾರ ಪದಾರ್ಥಗಳನ್ನು ಒದಗಿಸುವುದು ಇದರ ಹಿಂದಿನ ಸದುದ್ದೇಶ, ಈ ರಾಮ ನವಮಿಯ ವೇಳೆ ಪಾನಕ,ಮಜ್ಜಿಗೆ ಹಾಗೂ ಕೋಸಂಬರಿ ಹಂಚುವಾಗ ಆದಷ್ಟೂ "ಪ್ಲಾಸ್ಟಿಕ್ ಲೋಟ ಹಾಗೂ ಬಟ್ಟಲು"ಗಳನ್ನು ಬಳಸದೆ "ಪರಿಸರ ಸ್ನೇಹಿ" ಲೋಟ & ಬಟ್ಟಲುಗಳನ್ನು ಬಳಸೋಣ. 

'ಇಂಜಿನಿಯರಿಂಗ್' ದಿನಗಳಲ್ಲಿ 'ಹಾಸ್ಟೆಲ್' ನ ಸ್ನೇಹಿತರೆಲ್ಲರೂ ಸೇರಿ 'ರಾಮ ನವಮಿ' ಹಬ್ಬವನ್ನು ಆಚರಿಸಿದ್ದೆವು,ಏಳು ವರ್ಷಗಳು ಕಳೆದರು ಆ ಎಲ್ಲ ನೆನಪುಗಳು ಇನ್ನೂಹಚ್ಚ ಹಸುರಾಗಿಯೇ ಉಳಿದಿದೆ,ಇಷ್ಟೆಲ್ಲಾ ಸಂಗತಿಗಳು ನೆನಪಾದಾಗ ಈ ಪುಟ್ಟ ಲೇಖನ ಬರೆಯಬೇಕೆನಿಸಿತು,ಸರ್ವರಿಗೂ 'ಶ್ರೀ ರಾಮ ನವಮಿಯ' ಶುಭಾಶಯಗಳು, "ರಾಮಾಯ ರಾಮ ಭದ್ರಾಯ ರಾಮಚಂದ್ರಾಯ ವೇದಸೇ ರಘುನಾಥಾಯ ನಾಥಾಯ ಸೀತಾಯ ಪತಯೇ ನಮಃ".

ಸುಪ್ರೀತ್ 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ವಿಶ್ವದೆಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಯೋಗ"

ದೀಪಾವಳಿ,ಶ್ರೀ ಕೃಷ್ಣ ಜನ್ಮಾಷ್ಟಮಿ,ಕಾಳಿ ಪೂಜೆ ಹಾಗೂ ಗಣೇಶ ಚತುರ್ಥಿ ಆಚರಣೆಗೇಕೆ ವಿರೋಧ ??

ರಾಷ್ಟ್ರಗೀತೆ ಪ್ರಸಾರವಾಗುವ ವೇಳೆ ಎದ್ದು ನಿಂತು ಗೌರವಿಸುವುದನ್ನು ಸಹ ಹೇಳಿಕೊಡಬೇಕೆ ಸ್ವಾಮಿ ???