"ದಿನೇದಿನೇ ನಮ್ಮನ್ನು ಆವರಿಸುತ್ತಿರುವ ಚೂಟಿಯುಲಿಗಳು(ಸ್ಮಾರ್ಟ್ ಫೋನ್ ಗಳು )"
ದಿನೇದಿನೇ ನಮ್ಮನ್ನು ಆವರಿಸುತ್ತಿರುವ ಚೂಟಿಯುಲಿಗಳು(ಸ್ಮಾರ್ಟ್ ಫೋನ್ ಗಳು )
ಹತ್ತು ವರ್ಷಗಳ ಹಿಂದೆ ಬಹುತೇಕರ ಬಳಿ ಮೊಬೈಲ್ ಫೋನ್ ಗಳೇ ಇರಲಿಲ್ಲ, ಆಗಷ್ಟೇ ಕಾಲೇಜಿನ ಮೆಟ್ಟಿಲು ಏರಿದ್ದ ಸ್ವಲ್ಪ ವಿದ್ಯಾರ್ಥಿಗಳ ಬಳಿ ಮೊಬೈಲ್ ಫೋನ್ ಗಳು ರಾರಾಜಿಸುತ್ತಿದ್ದವು, ನೋಕಿಯಾ ಕಂಪನಿಯ ೧೧೦೦,೧೬೦೦ ಹಾಗು ೬೬೦೦ ಸರಣಿಯ ಮೊಬೈಲುಗಳು ಹೆಚ್ಚಾಗಿ ಕಂಡುಬರುತ್ತಿತ್ತು ಇದಲ್ಲದೆ ಸೋನಿ ಏರಿಕ್ಸೆನ್ ಕಂಪನಿಯ ವಾಕ್ಮನ್ ಹಾಗೂ ಸೈಬರ್ ಶಾಟ್ ಸರಣಿಯ ಮೊಬೈಲುಗಳು ಕೆಲವರ ಬಳಿ ಇತ್ತು, ಈಗಿನ ದಿನಗಳಲ್ಲಿ ಉಚಿತ ಸಿಮ್ ಗಳು ಲಭ್ಯವಿರುವಂತೆ ಆಗಿನ ದಿನಗಳಲ್ಲಿ ಉಚಿತ ಸಿಮ್ ಗಳು ದೊರಕುತ್ತಿರಲಿಲ್ಲ, ಒಂದು ಸಿಮ್ ಖರೀದಿಸಲು ಬಹಳಷ್ಟು ಹಣ ಖರ್ಚಾಗುತ್ತಿತ್ತು,ಹೆಚ್ಚು ಹಣ ಕೊಟ್ಟು ಸಿಮ್ ಕೊಂಡುಕೊಂಡ ನೆನಪು ಕೆಲವರಿಗಿದೆ,ವಿದ್ಯಾರ್ಥಿಗಳಿಗೆ ಹಾಗೂ ಸೀಮಿತ ಗ್ರಾಹಕರಿಗೆ ಮಾತ್ರ ಉಚಿತ ಸಂದೇಶ ರವಾನಿಸುವ ಕೊಡುಗೆಗಳಿತ್ತು,ಆಗ ಟೆಕ್ಸ್ಟ್ ಮೆಸೇಜ್ ಗಳ ರವಾನೆ ಹೆಚ್ಚಾಗಿ ಆಗುತಿತ್ತು, ಆಗಾಗ ದೃಶ್ಯ ಸಂದೇಶಗಳನ್ನು(ಪಿಕ್ಚರ್ ಮೆಸೇಜ್ ) ಗಳನ್ನು ಪ್ರೀತಿಪಾತ್ರರಿಗೆ ಕಳುಹಿಸುವುದೇ ದೊಡ್ಡ ಸಂಗತಿಯಾಗಿತ್ತು,ಬೆರಳೆಣಿಕೆ ಅಷ್ಟು ಜನರ ಬಳಿ ತರ ತರದ ರಿಂಗಟೋನ್ ಗಳು ಇರುತ್ತಿದ್ದವು, ಈಗಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ಗಳಲ್ಲಿ ಹಾಡುಗಳನ್ನು ಕೇಳುವಂತೆ ಆಗಿನ ದಿನಗಳಲ್ಲಿ ರಿಂಗ್ ಟೋನ್ ಗಳನ್ನೂ ಕೇಳಲಾಗುತ್ತಿತ್ತು !! ಉಚಿತ ಕರೆಗಳು ನಿರ್ದಿಷ್ಟ ನೆಟ್ ವರ್ಕ್ ಗಳಿಗೆ ಸೀಮಿತವಾಗಿತ್ತು, ಫುಲ್ ಟಾಕ್ ಟೈಮ್ ಕೊಡುಗೆಗಳು ಅಷ್ಟಾಗಿ ಚಾಲ್ತಿಯಲ್ಲಿರಲಿಲ್ಲ, ಇತರರೊಂದಿಗೆ ಮಾತನಾಡಲು ಹಾಗೂ ಸಂದೇಶಗಳನ್ನೂ ರವಾನಿಸಲು ಮೊಬೈಲುಗಳನ್ನು ಬಳಸಲಾಗುತಿತ್ತು,ಅಂತರ್ಜಾಲದ ಬಗ್ಗೆ ಹೆಚ್ಚು ಅರಿವಿಲ್ಲದ ಕಾರಣದಿಂದ ಮೊಬೈಲ್ ಮೂಲಕ ಅಂತರ್ಜಾಲದ ಸಂಪರ್ಕ ಆ ದಿನಗಳಲ್ಲಿ ಅಲ್ಲೋ ಇಲ್ಲೋ ಎಂಬಂತೆ ಕೆಲವೇ ಕಡೆ ಆಗುತಿತ್ತು,ನೂರಾರು ಸಂಸ್ಥೆಯ ನೂರಾರು ಬಗೆಯ ಮೊಬೈಲುಗಳು ಮಾರುಕಟ್ಟೆಯಲ್ಲಿ ಲಭ್ಯವಿರುವ ಈ ದಿನಗಳಿಗೂ, ಕೆಲವೇ ಕೆಲವು ಸಂಸ್ಥೆಯ ಮೊಬೈಲುಗಳು ಲಭ್ಯವಿದ್ದ ಆ ದಿನಗಳಿಗೂ ಅಜಗಜಾಂತರ ವ್ಯತ್ಯಾಸವೇ ಇದೆ.
ದೂರವಾಣಿ ಕರೆಗಳನ್ನು ನೆಚ್ಚಿಕೊಂಡಿದ್ದ ಜನ ಸಾಮಾನ್ಯರು ಹೊಸದಾಗಿ ಬಿಡುಗಡೆ ಆಗಿದ್ದ ಚರವಾಣಿಗಳಿಗೆ ತಮ್ಮನ್ನು ತಾವು ಹೊಂದಿಸಿಕೊಳ್ಳಲು ಬಹಳಷ್ಟು ಸಮಯವೇ ಬೇಕಾಯಿತು ,ಮನೆಯಲ್ಲಿ ಕುಳಿತು ಇತರರೊಂದಿಗೆ ಸಂವಹನ ಮಾಡುತ್ತಿದ್ದ ವ್ಯಕ್ತಿ ಕೆಲವು ವರ್ಷಗಳ ನಂತರ ಹೋದಲ್ಲೆಲ್ಲಾ ಕೊಂಡೊಯ್ಯಬಲ್ಲಂತಹ ಮೊಬೈಲ್ ಗಳನ್ನೂ ಬಳಸುತ್ತೇನೆಂದು ಊಹಿಸಿರಲಿಲ್ಲವೇನೋ?? ಹೀಗೆ ಸಾಧಾರಣವಾದ ಮೊಬೈಲ್ ಗಳಿಂದ ಆರಂಭವಾದ ಮೊಬೈಲ್ ಕ್ರಾಂತಿ ಈಗ ಸ್ಮಾರ್ಟ್ ಫೋನ್ ಮೂಲಕ ಇಡೀ ವಿಶ್ವವನ್ನೇ ಆವರಿಸಿದೆ, ಒಂದು ಕಾಲದಲ್ಲಿ ಗೇಮ್ ಗಳನ್ನು ಆಡಲು ಟಿ ವಿ,ವಿಡಿಯೋ ಗೇಮ್ ಹಾಗೂ ಕಂಪ್ಯೂಟರ್ ಗಳ ಮೊರೆ ಹೋಗುತ್ತಿದ್ದ ಗ್ರಾಹಕ ಮಹಾಪ್ರಭು ಈಗ ದಿನವೊಂದರಲ್ಲೇ ಸ್ಮಾರ್ಟ್ ಫೋನಿನ ಮೂಲಕ ವಿವಿಧ ಗೇಮ್ ಗಳನ್ನು ಅನ್ ಇನ್ಸ್ಟಾಲ್ ಮಾಡಬಲ್ಲ ಮಟ್ಟಕ್ಕೆ ಬೆಳೆದು ನಿಂತಿರುವುದಕ್ಕೆ ತಂತ್ರಜ್ಞಾನದ ಕ್ಷಿಪ್ರ ಬೆಳವಣಿಗೆಯೇ ಕಾರಣ,ಟಿ ವಿ ಮೂಲಕ ತನಗೆ ಇಷ್ಟವಾದ ಕಾರ್ಯಕ್ರಮಗಳನ್ನು ನೋಡುತಿದ್ದ ಜನ ಈಗಿನ ದಿನಗಳಲ್ಲಿ ಹಾಟ್ ಸ್ಟಾರ್ ಮೂಲಕ ಎಲ್ಲ ಕಾರ್ಯಕ್ರಮಗಳನ್ನು ಸ್ಮಾರ್ಟ್ ಫೋನ್ ಮೂಲಕ ತಾವಿರುವ ಕಡೆಯಲ್ಲಿ ನೋಡುತ್ತಿರುವುದು ಸಹ ತಂತ್ರಜ್ಞಾನದ ಪ್ರತಿಫಲ.ಆಡಿಯೋ ಕರೆ ಮಾಡಲು ಸೀಮಿತವಾಗಿದ್ದ ಮೊಬೈಲ್ ಮುಂದೊಂದು ದಿನ ವಿಡಿಯೋ ಕರೆ ಮಾಡುವ ಹಂತಕ್ಕೆ ಬೆಳೆಯುತ್ತದೆ!
ಗಣಕ ಯಂತ್ರಗಳಿಗಷ್ಟೇ ಸೀಮಿತವಾಗಿದ್ದ ಅಂತರ್ಜಾಲದ ಸಂಪರ್ಕ ಮೊಬೈಲ್ ಮೂಲಕವೂ ಜನ ಮನ ಮುಟ್ಟುತ್ತದೆ, ೨ಜಿ ಶುರುವಾದ ಇಂದ ತಂತ್ರಜ್ಞಾನದ ಓಟ ಈಗ ೪ಜಿ ಯನ್ನೂ ಮೀರಿ ಮುಂದುವರಿಯುತ್ತಿದೆ,ಆರಂಭಿಕ ದಿನಗಳಲ್ಲಿ ಮೊಬೈಲ್ ಮೂಲಕ ಅಂತಾರ್ಜಾಲದ ಸಂಪರ್ಕ ತುಸು ನಿಧಾನವೆನಿಸಿದ್ದಂತೂ ನಿಜ, ಆದರೆ ಕಾಲ ಚಕ್ರ ಉರುಳಿದಂತೆ ಅದರ ವೇಗ ಹೆಚ್ಚುತ್ತಾ ಹೋಯಿತು,ಇಂದು ಸ್ಮಾರ್ಟ್ ಫೋನ್ ಮೂಲಕ ನೂರಾರು ಕಾರ್ಯಕ್ರಮಗಳನ್ನು ಲೈವ್ ಸ್ಟ್ರೀಮಿಂಗ್ ಮೂಲಕ ನೋಡಬಹುದಾದ ಅತ್ಯಾಧುನಿಕ ಸೌಲಭ್ಯ ಕೋಟ್ಯಂತರ ಗ್ರಾಹಕರಿಗಿದೆ, ಸ್ಮಾರ್ಟ್ ಫೋನ್ ಗಳ ಬೆಳವಣಿಗೆ ಆದಂತೆಲ್ಲಾ ಸಾಮಾಜಿಕ ಜಾಲತಾಣಗಳ ಬಳಕೆ ಕೂಡ ಹೆಚ್ಚಾಗುತ್ತಾ ಹೋಯಿತು, ಕೋಟ್ಯಂತರ ಜನ ಸ್ಮಾರ್ಟ್ ಫೋನ್ ಮುಖೇನ ಫೇಸ್ ಬುಕ್, ವಾಟ್ಸಪ್ ಹಾಗೂ ಟ್ವಿಟ್ಟರ್ ಗಳಲ್ಲಿ ದಿನದ ಬಹು ಪಾಲು ಸಮಯ ಸಕ್ರಿಯರಾಗಿರುತ್ತಾರೆ, ತಿಂಡಿ,ಊಟ ಹಾಗು ನಿದ್ದೆ ಬಿಟ್ಟೇವು ಆದರೆ ಸ್ಮಾರ್ಟ್ ಫೋನ್, ವಾಟ್ಸಪ್ ಹಾಗೂ ಫೇಸ್ ಬುಕ್ ಬಿಡೆವು ಎಂಬ ಜನ ಸಮೂಹ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ,ಹತ್ತು ನಿಮಿಷ ಬಳಸೋಣ ಎಂಬ ಧ್ಯೇಯದೊಂದಿಗೆ ಶುರುವಾಗುವ ಸ್ಮಾರ್ಟ್ ಫೋನ್ ಬಳಕೆಯ ಪ್ರಕ್ರಿಯೆ ಅರ್ಧ ತಾಸು ಆದರೂ ನಿಲ್ಲುವುದಿಲ್ಲ,ಹದಿನೈದು ವರ್ಷಗಳ ಹಿಂದೆ ಒಬ್ಬರೊನ್ನೊಬ್ಬರು ಭೇಟಿಯಾಗಿ ಹರಟೆ ಹೊಡೆಯುತ್ತಿದ್ದ ಆ ಚಿತ್ರಣ ಇಂದು ಮರೆಯಾಗುತ್ತಾ ಬರುತ್ತಿದೆ, ಫೇಸ್ ಬುಕ್ ಅಲ್ಲಿ ಸ್ನೇಹಿತರಾಗಿರುವ ಬಹುಪಾಲು ಸ್ನೇಹಿತರನ್ನು ಫೇಸ್ ಬುಕ್ ಅಲ್ಲಿಯೇ ಸಂಪರ್ಕಿಸುವ ಸಂಪ್ರದಾಯ ಎಲ್ಲೆಡೆ ಹೆಚ್ಚಾಗುತ್ತಿದೆ,ಮೊದಲೆಲ್ಲಾ ಮೊಬೈಲ್ ಬಳಕೆ ಕಡಿಮೆ ಇದ್ದ ದಿನಗಳಲ್ಲಿ ದೂರದ ಊರುಗಳಿಗೆ ಸಂಚರಿಸುವಾಗ ಜನ ಒಬ್ಬರ ಬಳಿ ಒಬ್ಬರು ಮಾತನಾಡುತ್ತಿದ್ದರು, ಸ್ಮಾರ್ಟ್ ಫೋನ್ ಗಳು ಇರುವ ಈ ದಿನಗಳಲ್ಲಿ ಬಹುತೇಕ ಮಂದಿ ಮೊಬೈಲ್ ಗಳೊಂದಿಗೆ ಬಹಳಷ್ಟು ಸಮಯ ಕಳೆಯುತ್ತಿರುವುದರಿಂದ ಇತರರ ಸಂಪರ್ಕಕ್ಕೆ ಸಾಧ್ಯತೆಗಳೇ ಇಲ್ಲದಂತಾಗಿರುವುದು ವಿಷಾದಕರ ಸಂಗತಿ. ಸಭೆ,ಸಮಾರಂಭಗಳಿಗೆ ಆಹ್ವಾನಿಸಲು ಮನೆ ಮನೆಗೆ ಭೇಟಿ ನೀಡುತ್ತಿದ್ದ ಜನ ಈಗ ಸ್ಮಾರ್ಟ್ ಫೋನ್ ಗಳ ಮೂಲಕವೇ ಆಹ್ವಾನಿಸುತ್ತಿದ್ದಾರೆ, ದೂರದಲ್ಲಿರುವವರು ಈ ರೀತಿ ಆಹ್ವಾನಿಸಿದರೆ ಅದಕ್ಕೆ ಅರ್ಥವಿದೆ, ಹತ್ತಿರದಲ್ಲಿದ್ದವರು ಈ ಮಾರ್ಗ ಅನುಸರಿಸಿದರೆ ಅದು ಎಷ್ಟು ಸರಿ ??
ಹಿಂದೆ ವಿದ್ಯುತ್ ಬಿಲ್ ಪಾವತಿಸಲು, ನೀರಿನ ಬಿಲ್ ಪಾವತಿಸಲು, ಗ್ಯಾಸ್ ಬಿಲ್ ಪಾವತಿಸಲು ಸರದಿಯಲ್ಲಿ ನಿಲ್ಲ ಬೇಕಿತ್ತು, ತಂತ್ರಜ್ಞಾನ ಮುಂದುವರಿದಂತೆ ಈಗ ಬಹುತೇಕ ಬಿಲ್ ಪಾವತಿಗಳನ್ನು ಸ್ಮಾರ್ಟ್ ಫೋನ್ ಮೂಲಕ ಮಾಡಬಹುದಾಗಿರುವುದು ಸಂತೋಷದಾಯಕ, ಹಿಂದೊಮ್ಮೆ ಆಟೋ ಗಳಿಗಾಗಿ, ಕ್ಯಾಬ್ ಗಳಿಗಾಗಿ ಪರದಾಡಬೇಕಿತ್ತು,ಈಗ ಓಲಾ ಹಾಗೂ ಉಬೆರ್ ಅಪ್ಲಿಕೇಶನ್ ಮೂಲಕ ಸ್ಮಾರ್ಟ್ ಫೋನ್ ಇಂದ ನಾವಿರುವ ಸ್ಥಳದಲ್ಲಿಯೇ ಬುಕಿಂಗ್ ಮಾಡಬಹುದಾಗಿರುವುದು ಸಹ ಖುಷಿಯಾದ ವಿಷಯ. ಹೀಗೆ ಸ್ಮಾರ್ಟ್ ಫೋನ್ ಗಳಿಂದ ನಾನಾ ಉಪಯೋಗಗಳು ಹಾಗೂ ದುಷ್ಪರಿಣಾಮಗಳಿದೆ, ಸ್ಮಾರ್ಟ್ ಫೋನಗಳನ್ನು ಬಳಸುವ ಮನುಷ್ಯ ಸ್ಮಾರ್ಟ್ ಆದರೆ ಯಾವುದೇ ತೊಂದರೆಗಳು ಇರದು !!

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ