"ನದಿಗಳನ್ನು ರಕ್ಷಿಸಿ ಎಂಬ ಬೃಹತ್ ಅಭಿಯಾನದ ಮಹತ್ವ"




"ನದಿಗಳನ್ನು ರಕ್ಷಿಸಿ ಎಂಬ ಬೃಹತ್ ಅಭಿಯಾನದ ಮಹತ್ವ" 

'ಗಂಗೇಚ ಯಮುನೇಚ ಗೋದಾವರಿ ಸರಸ್ವತಿ ನರ್ಮದೆ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿದಿಂ ಕುರುಮ್ ' ಎಂಬ ಶ್ಲೋಕದಲ್ಲಿ ಪ್ರಸ್ತಾಪವಾಗಿರುವಂತೆ ಪವಿತ್ರವಾದ ನದಿಗಳು ನಮ್ಮ ಜೀವನಾಡಿಗಳೇ ಆಗಿವೆ, ನದಿಗಳನ್ನು ದೇವರಂತೆ ಪೂಜಿಸುತ್ತಾ ಬಂದಿರುವ ನಮ್ಮ ಸಂಸ್ಕೃತಿಯಲ್ಲಿ ನದಿಗಳಿಗೆ ತನ್ನದೇ ಆದ ಶ್ರೇಷ್ಠ ಸ್ಥಾನಮಾನವಿದೆ, ಶತಮಾನಗಳಿಂದ ನಮ್ಮ ಪೂರ್ವಜರು ನದಿಗಳನ್ನು ಕಾಪಾಡಿಕೊಂಡು ಬಂದಿದ್ದಾರೆ, ಕಳೆದ ೫೦ ವರ್ಷಗಳಿಂದ ನದಿಗಳ ಸ್ಥಿತಿ ಚಿಂತಾಜನಕವಾಗಿದೆ, ಜೀವಜಲವಾದ ನೀರಿನ ಮೂಲಗಳಾಗಿದ್ದ ಕಾವೇರಿ, ಕೃಷ್ಣ, ಗೋದಾವರಿ ನದಿಗಳು ೨೦ ಪ್ರತಿಶತಕ್ಕೂ ಹೆಚ್ಚು ಬತ್ತಿ ಹೋಗಿವೆ, ಕಾವೇರಿ ಬತ್ತು ಹೋದ ಪರಿಣಾಮ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ರೈತಾಪಿ ವರ್ಗ ಹಾಗೂ ಜನ ಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿರುವುದು ನಮ್ಮ ಕಣ್ಣಿಗೆ ಗೋಚರಿಸುತ್ತಿದೆ, ಕರ್ನಾಟಕ & ತಮಿಳುನಾಡು ಅಷ್ಟೇ ಅಲ್ಲದೆ ಆಂಧ್ರ ಪ್ರದೇಶ, ಮಧ್ಯ ಪ್ರದೇಶ ಹಾಗೂ ಮಹಾರಾಷ್ಟ್ರಗಳಲ್ಲಿ ರೈತರ ಪರಿಸ್ಥಿತಿ ಹೇಳತೀರದಷ್ಟು ಕೆಟ್ಟದಾಗಿದೆ,ನೂರಾರು ವರ್ಷಗಳಿಂದ ಕೃಷಿಯನ್ನು ಮೂಲಕಸುಬನ್ನಾಗಿಸಿಕೊಂಡಿರುವ ಕೃಷಿಕರು ೫೦ ವರ್ಷಗಳ ಹಿಂದೆ ಎಷ್ಟು ನೀರನ್ನು ಬಳಸುತ್ತಿದ್ದರೋ ಅದೇ ಪ್ರಮಾಣದ ನೀರನ್ನು ಇಂದಿಗೂ ಸಹ ಬಳಸುತ್ತಿದ್ದಾರೆ, ಆ ಒಟ್ಟು ಪ್ರಮಾಣದ ಶೇಖಡಾ ೩೦ ರಷ್ಟು ನೀರನ್ನು ಬಳಸಿ ಉತ್ತಮವಾಗಿ  ಕೃಷಿ ಮಾಡಬಹುದಾದ ವಿಧಾನಗಳು ಇಂದಿಗೆ ಲಭ್ಯವಿದೆ, ಇದರ ಸಲುವಾಗಿ ಸೂಕ್ತ ತಜ್ಞರ ತಂಡ ನಿರ್ಮಾಣವಾಗಬೇಕಾಗಿದ್ದು ರೈತರಲ್ಲಿ ನೀರಿನ ಬಳಕೆಯ ಬಗ್ಗೆ ಅರಿವು ಮೂಡಿಸಬೇಕಾಗಿದೆ, ನಾನಾ ಕಾರಣಗಳಿಂದ ಗಿಡ ಮರಗಳ ಸಂಖ್ಯೆಯಲ್ಲಿ ಗಣನೀಯ ಕುಸಿತ ಕಂಡು ಬರುತ್ತಿದ್ದು, ಪರಿಸ್ಥಿತಿ ಹೀಗೆ ಮುಂದುವರಿದರೆ ೨೦೩೦ ರ ವೇಳೆಗೆ ದೇಶದಲ್ಲಿ ತೀವ್ರ ಬರಗಾಲ ಎದುರಾಗಲಿದ್ದು ನೀರಿನ ಮಟ್ಟ  ೫೦% ರಷ್ಟು ಕುಸಿಯಲಿದೆ ಎಂಬುದು ಸಂಶೋಧನೆಗಳಿಂದ ತಿಳಿದುಬಂದಿದೆ,ನದಿಗಳ ಇಕ್ಕೆಲಗಳಲ್ಲಿ ಒಂದು ಕಿಲೋಮೀಟರು ದೂರದವರೆಗೂ ಹಣ್ಣು ಹಂಪಲುಗಳನ್ನು ನೀಡುವ ಗಿಡಗಳನ್ನು ಬೆಳೆಸುವುದರ ಮೂಲಕ ನದಿಗಳಿಗೆ ಪೂರಕ ವಾತಾವರಣ ಸೃಷ್ಟಿಸಬೇಕಾಗಿದೆ, ನದಿಯ ಸುತ್ತ ಮುತ್ತ ಕೃಷಿ ಮಾಡುತ್ತಿರುವ ರೈತರಿಗೆ ಈ ಯೋಜನೆಯ ಆರಂಭಿಕ ಹಂತದಲ್ಲಿ ಸರ್ಕಾರದ ಪ್ರೋತ್ಸಾಹದ ಅಗತ್ಯವಿದೆ,ಬೆಳೆ ಆಧಾರಿತ ಕೃಷಿ ಪದ್ಧತಿಗಿಂತ ಹಣ್ಣು ಆಧಾರಿತ ಕೃಷಿ ಪದ್ಧತಿ ಲಾಭದಾಯಕವಾಗಿರುವುದನ್ನು ವಿಯೆಟ್ನಾಂ ನ ಕೃಷಿ ತಂತ್ರಜ್ಞರು ಸಾಬೀತು ಪಡಿಸಿದ್ದಾರೆ, ಈ ರೀತಿಯ ನೂತನ ಪದ್ದತಿಗಳನ್ನು ಅಳವಡಿಸಿಕೊಳ್ಳಳು ಸರ್ಕಾರ ರೈತರ ಪರ ನಿಲ್ಲಬೇಕಾಗಿದೆ. ಈಗಾಗಲೇ ನಮ್ಮ ದೇಶದ ೨೫ ಕ್ಕೂ ಹೆಚ್ಚಿನ ಭಾಗ ಮರುಭೂಮಿಯಾಗಿ ಮಾರ್ಪಾಡಾಗಿದೆ,ಪದೇ ಪದೇ ಪ್ರಕೃತಿ ವಿಕೋಪಕ್ಕೆ ತುತ್ತಾಗುತ್ತಿರುವ ನಮ್ಮ ದೇಶದಲ್ಲಿ ಪ್ರಕೃತಿ ಸಂರಕ್ಷಿಸುವ ನಿಟ್ಟಿನಲ್ಲಿ ಸಾಕಷ್ಟು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ,ಇಷ್ಟಾದರೂ ಸಹ ಪರಿಸರ ಸಂರಕ್ಷಿಸುವ ಸಲುವಾಗಿ ನಾವೆಲ್ಲರೂ ಮಾಡಬೇಕಾದ ಕಾರ್ಯಗಳು ಬೆಟ್ಟದಷ್ಟು ಅಗಾಧವಾಗಿದೆ.

ಪರಿಸರ ಸಂರಕ್ಷಣೆಗಾಗಿ ವಿವಿಧ ಸಂಘಟನೆಗಳು ಶ್ರಮಿಸುತ್ತಿವೆ, ಸದ್ಗುರು ವಾಸುದೇವ್ ಜಗ್ಗಿ ಅವರ ಇಶಾ ಫೌಂಡೇಶನ್ ಸಂಸ್ಥೆ ಸಹ ಈ ನಿಟ್ಟಿನಲ್ಲಿ  ಕಾರ್ಯ ಪ್ರವೃತ್ತಗೊಂಡಿದ್ದು ನದಿಗಳನ್ನು ರಕ್ಷಿಸಿ ಎಂಬ ಅಭಿಯಾನಕ್ಕೆ ವಿದ್ಯುಕ್ತ ಚಾಲನೆ ನೀಡುವ ಹೊಸ್ತಿಲಲ್ಲಿದೆ, ನದಿಗಳು ನಮ್ಮ ಜೀವನಾಡಿಗಳು ಎಂಬ ಘೋಷವಾಕ್ಯದೊಂದಿಗೆ ಶುರುವಾಗುತ್ತಿರುವ ಈ ಅಭಿಯಾನ ಮೂಲಕ ದೇಶದ ಮೂಲೆ ಮೂಲೆಗಳನ್ನು ಮುಟ್ಟುವ ಇರಾದೆಯನ್ನು ಇಶಾ ಸಂಸ್ಥೆ ಒಳಗೊಂಡಿದೆ, ಈಗಾಗಲೇ ಈ ಅಭಿಯಾನಕ್ಕೆ ೧೬ ಕ್ಕೂ ಹೆಚ್ಚು ರಾಜ್ಯಗಳು ತಮ್ಮ ಬೆಂಬಲವನ್ನು ಸೂಚಿಸಿದೆ, ಸೆಪ್ಟೆಂಬರ್ ಮೊದಲ ವಾರದಿಂದ ಶುರುವಾಗಲಿರುವ ಆ ಅಭಿಯಾನದ ಉದ್ಘಾಟನೆ ಮಧ್ಯಪ್ರದೇಶದಲ್ಲಿ ಆಗಲಿದೆ, ನದಿಗಳ ಉಳಿವಿಗಾಗಾಗಿ ತಮ್ಮ ಬೆಂಬಲ ವ್ಯಕ್ತ ಪಡಿಸಿರುವ ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಈ ಅಭಿಯಾನಕ್ಕೆ ಹಸಿರು ನಿಶಾನೆ ತೋರಿಸಿದ್ದಾರೆ,ಈ ಆಂದೋಲನಕ್ಕಾಗಿ ಕನ್ಯಾಕುಮಾರಿಯಿಂದ ಹಿಮಾಲಯದ ವರೆಗೂ ಪ್ರವಾಸ ಮಾಡಲಿರುವ ಸದ್ಗುರು ವಾಸುದೇವ ಜಗ್ಗಿ ಹಾಗೂ ಅಸಂಖ್ಯಾತ ಸ್ವಯಂಸೇವಕರು ನದಿಗಳ ಮಹತ್ವದ ಬಗ್ಗೆ ಜನಮಾನಸದಲ್ಲಿ ಅರಿವು ಮೂಡಿಸಲಿದ್ದಾರೆ,ನದಿಗಳನ್ನು ರಕ್ಷಿಸುವುದು ಈ ಆಂದೋಲನದ ಮುಖ್ಯ ಉದ್ದೇಶವಾಗಿರುವ ಕಾರಣ ಪ್ರತಿಭಟನೆಗೆ ಇಲ್ಲಿ ಅವಕಾಶವಿಲ್ಲವೆಂದು ಸದ್ಗುರು ಅವರೇ ತಿಳಿಸಿದ್ದಾರೆ, ನೀರನ್ನು ಉಪಯೋಗಿಸುವ ಪ್ರತಿಯೊಬ್ಬ ಭಾರತೀಯನೂ ಸಹ ಈ ಅಭಿಯಂದದಲ್ಲಿ ಕೈ ಜೋಡಿಸಬೇಕಾಗಿ ತಿಳಿಸಿದ್ದಾರೆ, ಈ ಅಭಿಯಾನಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಅಕ್ಷಯ್ ಕುಮಾರ್, ಅನುಪಮ್ ಖೇರ್, ವಿರೇಂದ್ರ ಸೆಹ್ವಾಗ್ ಹಾಗು ಯಶ್ ರಂಥ ಘಟಾನುಘಟಿಗಳು ತಮ್ಮ ಬೆಂಬಲವನ್ನು ವ್ಯಕ್ತ ಪಡಿಸಿದ್ದಾರೆ, ಬೇಡಿಕೆಗಳಿಗೆ ಅಂಗೀಕಾರ ಸಿಗಲು ಜನ ಬೆಂಬಲ ಅತ್ಯವಶ್ಯಕವಾಗಿರುತ್ತದೆ, ನದಿಗಳನ್ನು ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದ್ದು ಈ ಅಭಿಯಾನದಲ್ಲಿ ನಾವೆಲ್ಲರೂ ಯಾವುದಾದರೊಂದು ರೀತಿಯಲ್ಲಿ ಭಾಗಿಗಳಾಗೋಣ. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ವಿಶ್ವದೆಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಯೋಗ"

ದೀಪಾವಳಿ,ಶ್ರೀ ಕೃಷ್ಣ ಜನ್ಮಾಷ್ಟಮಿ,ಕಾಳಿ ಪೂಜೆ ಹಾಗೂ ಗಣೇಶ ಚತುರ್ಥಿ ಆಚರಣೆಗೇಕೆ ವಿರೋಧ ??

ರಾಷ್ಟ್ರಗೀತೆ ಪ್ರಸಾರವಾಗುವ ವೇಳೆ ಎದ್ದು ನಿಂತು ಗೌರವಿಸುವುದನ್ನು ಸಹ ಹೇಳಿಕೊಡಬೇಕೆ ಸ್ವಾಮಿ ???