ಭಾರತ ಕಂಡ ಅಪರೂಪದ ರತ್ನ " ಸರ್ ಎಂ ವಿಶ್ವೇಶ್ವರಯ್ಯ"

ಇಂದು ಭಾರತ ದೇಶದಾದ್ಯಂತ ಸಾವಿರಾರು ಇಂಜಿನಿಯರಿಂಗ್ ಕಾಲೇಜುಗಳಿವೆ, ಪ್ರತಿ ವರ್ಷವೂ ಸಹ ಲಕ್ಷಾಂತರ ಇಂಜಿನಿಯರ್ ಗಳು ಸೃಷ್ಟಿಗೊಳ್ಳುತ್ತಿದ್ದಾರೆ ಆದರೆ ಇಂಜಿನಿಯರ್ ಎಂದಾಕ್ಷಣ ನಮಗೆ ನೆನಪಾಗುವ ಹೆಸರೊಂದಿ ದ್ದರೆ ಅದುವೇ ಸರ್ ಎಂ ವಿ, ದೇಶದ ಸರ್ವಾಂಗೀಣ ಅಭಿವೃದ್ಧಿಗೆ ನೆರವಾಗಿದ್ದ ಮಹಾನ್ ಕರ್ಮಯೋಗಿ ಹಾಗೂ ವಿಶ್ವ ವಿಖ್ಯಾತ ಇಂಜಿನಿಯರ್ ವಿಶ್ವೇಶ್ವರಯ್ಯನವರಿಗೆ ಗೌರವ ಸೂಚಿಸುವ ಸಲುವಾಗಿ ಇಂಜಿನಿಯರ್ ದಿನವನ್ನು ಅವರ ಜನ್ಮದಿನವಾದ ಸೆಪ್ಟೆಂಬರ್ ೧೫ ರಂದು  ಪ್ರೀತಿಪೂರ್ವಕವಾಗಿ ಆಚರಿಸಲಾಗುತ್ತದೆ, ೧೫೦ ವರ್ಷಗಳ ಹಿಂದೆ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿ ಎಂಬ ಗ್ರಾಮದಲ್ಲಿ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಜನನವಾಗುತ್ತದೆ, ಆರ್ಥಿಕವಾಗಿ ಅಷ್ಟೇನೂ ಸಧೃಢವಲ್ಲದ ಕುಟುಂಬದಲ್ಲಿ ಜನಿಸಿದ ಅಯ್ಯನವರು ನಾನಾ ಕಷ್ಟಗಳ ನಡುವೆಯೂ ವ್ಯಾಸಂಗದಲ್ಲಿ ಎಲ್ಲರಿಗಿಂತ ಮುಂದಿದ್ದರು, ಕರ್ನಾಟಕದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಮುಗಿಸಿದ ಅಯ್ಯನವರು ಉನ್ನತ ವಿದ್ಯಾಭ್ಯಾಸಕ್ಕಾಗಿ ಹೊರ ರಾಜ್ಯಕ್ಕೆತೆರಳುತ್ತಾರೆ, ಓದಿನಲ್ಲಿ ಸದಾ ಮುಂದಿದ್ದ ಅಯ್ಯನವರು ವಿದ್ಯಾರ್ಥಿ ವೇತನಕ್ಕೆ ಭಾಜನರಾಗಿ ಸಿವಿಲ್ ಇಂಜಿನಿಯರಿಂಗ್ ಪದವಿಯನ್ನು ಪಡೆಯುತ್ತಾರೆ, ಉನ್ನತ ಶ್ರೇಣಿಯೊಂದಿಗೆ ತೇರ್ಗಡೆಹೊಂದಿದ್ದ ಅಯ್ಯನವರಿಗೆ ಸರ್ಕಾರೀ ನೌಕರಿ ಸುಲಭವಾಗಿ ಒಲಿಯುತ್ತದೆ, ಕರ್ನಾಟಕದ ಹೊರಗೆ ತಮ್ಮ ವೃತ್ತಿಯನ್ನು ಆರಂಭಿಸುವ ಅಯ್ಯನವರು ಪೂನಾ ಸರ್ಕಾರದಲ್ಲಿ ವಿವಿಧ ಹುದ್ಧೆಗಳನ್ನು ಅಲಂಕರಿಸುತ್ತಾರೆ, ತಮ್ಮ ಕಾರ್ಯಕ್ಷಮತೆ ಹಾಗೂ ಬುದ್ದಿವಂತಿಕೆಯಿಂದ ದೇಶವಾಸಿಗಳ ಹಾಗೂ ವಿದೇಶಿಯರ ಅಪಾರ ಮೆಚ್ಚುಗೆಗೆ ಪಾತ್ರರಾಗುತ್ತಾರೆ,ಚರಂಡಿ ವ್ಯವಸ್ಥೆಯ ರೂಪುರೇಷೆಗಳ ಸಿದ್ದತೆಯಲ್ಲಿ,ಕಾಲುವೆಗಳ ನಿರ್ಮಾಣದಲ್ಲಿ, ಡ್ಯಾಮ್ ನಿರ್ಮಾಣದಲ್ಲಿ, ನೀರನ್ನು ಸಮರ್ಪಕವಾಗಿ ಹಾಗೂ ವೈಜ್ಞಾನಿಕವಾಗಿ ಸಂಗ್ರಹಿಸುವಲ್ಲಿ ವಿವಿಧ ಸರ್ಕಾರಗಳಿಗೆ  ಉಪಯುಕ್ತ  ಸಲಹೆಗಳನ್ನು ನೀಡಿ ಸರ್ಕಾರ ಹಾಗೂ ಜನಮಾನಸದಲ್ಲಿ ಅಚ್ಚಳಿಯದ ಚಾಪನ್ನು ಒತ್ತುತ್ತಾರೆ, ಮೈಸೂರು ಸಂಸ್ಥಾನ, ಪೂನಾ, ಹೈದೆರಾಬಾದ್ ಸಂಸ್ಥಾನ ಹಾಗೂ ವಿದೇಶದಲ್ಲಿಯೂ ಸಹ ಅಯ್ಯನವರು ಸೇವೆ ಸಲ್ಲಿಸಿರುತ್ತಾರೆ. 

ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ನಡೆಯುತ್ತಿದ್ದ ಸಭೆ ಸಮಾರಂಭಗಳಲ್ಲಿ ಬ್ರಿಟಿಷರಿಗೆ ಮೊದಲಿನ ಆದ್ಯತೆ ಇರುತಿತ್ತು, ಮೊದಲನೆಯ ಸಾಲಿನಲ್ಲಿ ಬ್ರಿಟಿಷರು ಕೂತರೆ ಹಿಂಬದಿಯಲ್ಲಿ ಭಾರತೀಯರು ಕೂರಬೇಕಿತ್ತು, ಇದನ್ನು ಕಟುವಾಗಿ ಟೀಕಿಸಿದ್ದ ವಿಶ್ವೇಶ್ವರಯ್ಯನವರು ಅಸಮಾನತೆಯ ವಿರುದ್ಧ ದ್ವನಿ ಎತ್ತಿದ್ದರು, ಅಂದಿನ ಸಮಯದಲ್ಲಿ ಉನ್ನತ ವಿದ್ಯಾಭ್ಯಾಸದ ಸಲುವಾಗಿ  ಕನ್ನಡಿಗರು ತಮಿಳುನಾಡಿಗೆ ತೆರಳಬೇಕಿತ್ತು ಇದನ್ನು ಅರಿತಿದ್ದ ಅಯ್ಯನವರು ಮಹಾರಾಜರ ಮನವೊಲಿಸಿ ವಿಶ್ವವಿದ್ಯಾಲಯದ ಸ್ಥಾಪನೆಗೆ ನೆರವಾಗುತ್ತಾರೆ, ಕೃಷ್ಣ ರಾಜಸಾಗರ ಡ್ಯಾಮ್ ನಿರ್ಮಾಣದ ವೇಳೆಯಲ್ಲಿ ನಾನಾ ಕಷ್ಟಗಳು ಎದುರಾದರೂ ಸಹ ಯಾವುದಕ್ಕೂ ಜಗ್ಗದೆ ಹಿಡಿದ ಕೆಲಸವನ್ನು ಮಾಡಿಯೇ ಮುಗಿಸುತ್ತಾರೆ, ಇದರ ಫಲವಾಗಿ ಇಂದು ಚಾಮರಾಜನಗರ, ಮಂಡ್ಯ ಹಾಗೂ ಮೈಸೂರು ಸುತ್ತ ಮುತ್ತಲಿನ ಜನ ಕಾವೇರಿ ನೀರನ್ನು ಪಡೆಯುತ್ತಿದ್ದಾರೆ, ಕನ್ನಡ ಸಾಹಿತ್ಯವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ನ್ನೂ ಸ್ಥಾಪಿಸುತ್ತಾರೆ, ಹೆಣ್ಣು ಮಕ್ಕಳಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯ ಧನ/ ವಿದ್ಯಾರ್ಥಿ ವೇತನ ದೊರಕಿಸುವ ಸಲುವಾಗಿಯೂ ಸಹ ಶ್ರಮಿಸಿರುತ್ತಾರೆ, ಕೈಗಾರಿಕೋದ್ಯಮ ಹಾಗು ದುಡಿಮೆಯ ಮೇಲೆ ಸಂಪೂರ್ಣ ನಂಬಿಕೆ ಇಟ್ಟಿದ್ದ ಅಯ್ಯನವರು ಭದ್ರಾವತಿ ಉಕ್ಕಿನ ಖಾರ್ಕಾನೆ ಹಾಗೂ ಮೈಸೂರ್ ಸ್ಯಾಂಡಲ್ ನಂತಹ ಸಂಸ್ಥೆಗಳ ಸ್ಥಾಪನೆಗೆ ಕಾರಣವಾಗುತ್ತಾರೆ, ಮೇಕ್ ಇನ್ ಇಂಡಿಯಾ ಕಲ್ಪನೆಯನ್ನು ಆಗಿನ ದಿನಗಳಲ್ಲೇ ಚಾಲ್ತಿಗೆ ತಂದಿದ್ದ ಗರಿಮೆ ಅಯ್ಯನವರಿಗೆ ಸಲ್ಲಬೇಕು, ಒಮ್ಮೆ ಜೋಗ ಜಲಪಾತಕ್ಕೆ ತೆರಳಿದ್ದ ಅಯ್ಯನವರು ಧುಮ್ಮಿಕುತ್ತಿರುವ ನೀರನ್ನು ಕಂಡು ಇಷ್ಟೊಂದು ನೀರು ವ್ಯರ್ಥವಾಗುತ್ತಿದೆಯಲ್ಲ ಎಂದು ಮರುಗುತ್ತಾರೆ,ತದನಂತರ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತಹ ಯೋಜನೆಗೆ ಚಾಲನೆ ಕೊಡುತ್ತಾರೆ. 

ವಿಶ್ವೇಶ್ವರಯ್ಯನವರು ಶಿಸ್ತು, ಸಮಯ ಪಾಲನೆ ಹಾಗೂ ಪ್ರಾಮಾಣಿಕತೆಗೆ ಹೆಸರುವಾಸಿಯಾಗಿದ್ದವರು, ಮುಖ್ಯಮಂತ್ರಿಗಳನ್ನು ಹಾಗೂ ಗೌರವಾನ್ವಿತರನ್ನು ಭೇಟಿ ಮಾಡಬೇಕಿದ್ದ ಸಮಯದಲ್ಲಿ ಚಾಚೂ ತಪ್ಪದೆ ಶಿಷ್ಟಾಚಾರಗಳನ್ನು ಪಾಲಿಸುತ್ತಿದ್ದರು, ಇಂದಿನ ಪೀಳಿಗೆಯ ಬಹುತೇಕರು ಈ ರೀತಿಯ ಆದರ್ಶಗಳನ್ನು ಇಟ್ಟುಕೊಳ್ಳದಿರುವುದು  ವಿಷಾದಕರ ಸಂಗತಿ, ವಿಶ್ವೇಶ್ವರಯ್ಯನವರನ್ನು ಭೇಟಿ ಮಾಡಬೇಕಿದ್ದರೆ ಸಮಯ ನಿಗದಿಯಾಗಿರುತಿತ್ತು, ಆ ಸಮಯದಲ್ಲಿಯೇ ಅವರನ್ನು ಭೇಟಿಯಾಗಬೇಕಿತ್ತು, ಸಮಯ ಪಾಲನೆ ಮಾಡದವರಿಗೆ ಭೇಟಿಗೆ ಅವಕಾಶವಿರುತ್ತಿರಲಿಲ್ಲ, ಶಿಸ್ತಿಗೆ ಹೆಸರಾಗಿದ್ದ ಅಯ್ಯನವರು ತಮ್ಮ ೮೦ ನೇ ಇಳಿ ವಯಸ್ಸಿನಲ್ಲಿಯೂ ಸಹ ಎತ್ತರದ ಜಾಗಕ್ಕೆ ಮೆಟ್ಟಿಲಿನಲ್ಲಿಯೇ ಹತ್ತಿಕೊಂಡು ಹೋಗಿ ಯೋಜನೆಯ ಕುರಿತಾಗಿ ಪರಿಶೀಲಿಸುತ್ತಿದ್ದರು, ಜಪಾನ್,ಚೀನಾ ಹಾಗೂ ಐರೋಪ್ಯ ದೇಶಗಳಿಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಅಲ್ಲಿಯ ತಂತ್ರಜ್ಞಾನ  ಸಂಬಂದಿ ವಿಷಯಗಳ ಕುರಿತಾಗಿ  ಅಧ್ಯಯನ ನಡೆಸುತ್ತಿದ್ದರು ಹಾಗೂ ಅದನ್ನು ನಮ್ಮ ದೇಶದಲ್ಲಿ ಹೇಗೆ ಅಳವಡಿಸಿಕೊಳ್ಳಬಹುದು ಎಂಬುದರ ಸಲುವಾಗಿ ಗಂಭೀರ ಚಿಂತನೆ ನಡೆಸುತ್ತಿದ್ದರು, ಸರ್ಕಾರದಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸಿದ್ದವರು ತಪ್ಪು ನಡೆಯನ್ನಿಟ್ಟಾಗ ಅದನ್ನು ಕಟುವಾಗಿ ಟೀಕಿಸುತ್ತಿದ್ದ ಅಯ್ಯನವರು ನೇರ ಸ್ವಭಾವ ಹೊಂದಿದ್ದ ಧೈರ್ಯಶಾಲಿಗಳು.    

ಭಾರತ ಸರ್ಕಾರ ನೀಡುವ ಅತ್ಯುನ್ನತ ಪ್ರಶಸ್ತಿಯಾದ ಭಾರತ ರತ್ನ ಪ್ರಶಸ್ತಿಗೆ ಭಾಜನರಾದ ಸರ್ ಎಂ ವಿಶ್ವೇಶ್ವರಯ್ಯನವರು ಕರುನಾಡಿಗೆ ಹಾಗೂ ಭಾರತಕ್ಕೆ ನೀಡಿದ ಕೊಡುಗೆ ಅಪಾರ, ವಿಶ್ವ ವಿಖ್ಯಾತ ಸರ್ ಎಂ ವಿಶ್ವೇಶ್ವರಯ್ಯನವರಿಗೆ ಕೋಟಿ ನಮನಗಳು. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ವಿಶ್ವದೆಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಯೋಗ"

ದೀಪಾವಳಿ,ಶ್ರೀ ಕೃಷ್ಣ ಜನ್ಮಾಷ್ಟಮಿ,ಕಾಳಿ ಪೂಜೆ ಹಾಗೂ ಗಣೇಶ ಚತುರ್ಥಿ ಆಚರಣೆಗೇಕೆ ವಿರೋಧ ??

ರಾಷ್ಟ್ರಗೀತೆ ಪ್ರಸಾರವಾಗುವ ವೇಳೆ ಎದ್ದು ನಿಂತು ಗೌರವಿಸುವುದನ್ನು ಸಹ ಹೇಳಿಕೊಡಬೇಕೆ ಸ್ವಾಮಿ ???