ಅಪರಾಧಿಗಳಿಗೆ ರಕ್ಷೆ, ನಿರಪರಾಧಿಗಳಿಗೆ ಶಿಕ್ಷೆ, ನ್ಯಾಯ ಎಲ್ಲಿದೆ ?
೨ಜಿ ಹಗರಣದ ಅಂತಿಮ ತೀರ್ಪು ನೆನ್ನೆಯಷ್ಟೇ ಹೊರಬಿದ್ದಿದ್ದು ಹಗರಣದಲ್ಲಿ ಭಾಗಿಯಾಗಿದ್ದ ೧೭ ಮಂದಿಗಳು ಸಾಕ್ಷಾಧಾರದ ಕೊರತೆಯ ಫಲವಾಗಿ ದೋಷಮುಕ್ತರಾಗಿದ್ದಾರೆ,೨ಜಿ ಹಗರಣದಿಂದ ದೇಶದ ಬೊಕ್ಕಸಕ್ಕೆ ೧.೭೬ ಲಕ್ಷ ಕೋಟಿ ನಷ್ಟವಾಗಿತ್ತೆಂಬ ಸತ್ಯಾಂಶ ಚಿಕ್ಕ ಪುಟ್ಟ ಮಕ್ಕಳಿಗೂ ಸಹ ಗೊತ್ತಿತ್ತು! ಅಂದಿನ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದ ಸಮಯದಲ್ಲಿ ಎ ರಾಜ ಟೆಲಿಕಾಂ ಸಚಿವರಾಗಿದ್ದರು,೨ಜಿ ತರಂಗ ಗುಚ್ಛಗಳ ಹರಾಜು ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮಾಯವಾಗಿ ಭ್ರಷ್ಟಾಚಾರ ತಾಂಡವವಾಡಿತ್ತು,ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಬಹುತೇಕ ಕಂಪನಿಗಳು ಸರ್ಕಾರದ ನೀತಿ ನಿಯಮಗಳನ್ನೆಲ್ಲಾ ಮುರಿದಿದ್ದವು,ಅನರ್ಹ ಸಂಸ್ಥೆಗಳಿಗೆ ಸಹಾಯ ಮಾಡಿದ ರಾಜ ಹಾಗೂ ಅವರ ತಂಡ ತನಗಿಷ್ಟ ಬಂದಂತೆ ಲೈಸನ್ಸ್ ನೀಡಿತ್ತು, ಮೊದಲು ಬಂದವರಿಗೆ ಮೊದಲ ಆದ್ಯತೆ ಹಾಗೂ ನ್ಯಾಯ ಸಮ್ಮತವಾಗಿ ಆಗಬೇಕಿದ್ದ ೨ಜಿ ಹಂಚಿಕೆ ಪ್ರಕ್ರಿಯೆ ಆಗಾಗಲೇ ಹಳ್ಳ ಹಿಡಿದಿತ್ತು, ಈ ಪ್ರಕರಣದ ಕುರಿತಾಗಿ ಸಾಕಷ್ಟು ಅಧ್ಯಯನ ಮಾಡಿದ್ದ ಸುಬ್ರಮಣಿಯನ್ ಸ್ವಾಮಿ ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದು ಪ್ರಧಾನಿಗಳಿಗೆ ಈ ಕುರಿತು ಪತ್ರ ಬರೆದಿದ್ದರು ಹಾಗೂ ಪ್ರತಿಕ್ರಿಯೆ ಬರುವುದುದು ತಡವಾದಾಗ ಕೋರ್ಟ್ ಮೆಟ್ಟಿಲೇರಲು ತಯಾರಾಗಿದ್ದರು.ಇದರ ಕುರಿತು ಸಿ ಎ ಜಿ ಕೂಡ ವರದಿಯೊಂದನ್ನು ಸಿದ್ದ ಪಡಿಸಿತ್ತು, ವರದಿಯ ಮೂಲಕ ತಿಳಿದುಬಂದಿದ್ದೇನೆಂದರೆ ರಾಜ ಅವರ ಆಜ್ಞೆಯಂತೆಯೇ ಭ್ರಷ್ಟಾಚಾರ ನಡೆದಿತ್ತು ಎಂಬುದು,ಸಿ ಎ ಜಿ ವರದಿಯನ್ನು ಪರಿಶೀಲಿಸಿದ ಸುಪ್ರೀಂ ಕೋರ್ಟ್ ರಾಜ ವಿರುದ್ಧ ತನಿಖೆಗೆ ಅವಕಾಶ ನೀಡಿತ್ತು, ತನಿಖೆಯ ವೇಳೆಯಲ್ಲಿ ರಾಜ ಹಾಗೂ ಕನಿಮೋಳಿ ಅವರನ್ನು ಬಂಧಿಸಲಾಗಿತ್ತು ,೨ಜಿ ಹಂಚಿಕೆಯಲ್ಲಿ ಅಕ್ರಮವಾಗಿ ಲಾಭ ಪಡೆದಿದ್ದ ಕಂಪನಿಗಳ ವಿರುದ್ಧವೂ ತನಿಖೆ ನಡೆಯಬೇಕೆಂದು ಸುಪ್ರೀಂ ಕೋರ್ಟ್ ಆದೇಶವನ್ನು ನೀಡಿತ್ತು, ತನಿಖೆಯ ನಂತರ ಅಕ್ರಮವಾಗಿ ಲೈಸೆನ್ಸ್ ಪಡೆದಿದ್ದ ೧೨೨ ಕಂಪನಿಗಳ ಲೈಸೆನ್ಸ್ ರದ್ದು ಪಡಿಸಲಾಯಿತು, ತದನಂತರ ೫ ವರ್ಷಗಳ ಕಾಲ ಕೋರ್ಟ್ ನಲ್ಲಿ ಈ ಹಗರಣದ ಕುರಿತು ಚರ್ಚೆಗಳಾದವು, ನೆನ್ನೆ ಪ್ರಕಟಗೊಂಡ ತೀರ್ಪಿನಲ್ಲಿ ೧೭ ಮಂದಿಯು ಖುಲಾಸೆಗೊಂಡಿರುವುದು ನಿಜಕ್ಕೂ ದುರಂತ !! ದೇಶಕ್ಕೆ ದೇಶವೇ ಭ್ರಷ್ಟ ರಾಜಕಾರಣಿಗಳಾದ ರಾಜ ಹಾಗೂ ಕನಿಮೊಳಿಯ ವಿರುದ್ಧ ಧ್ವನಿ ಎತ್ತುತ್ತಿದೆ,ಈ ಸಮಯದಲ್ಲಿ ನ್ಯಾಯಾಂಗದಿಂದ ಈ ರೀತಿಯ ತೀರ್ಪು ಹೊರಬಿದ್ದಿರುವುದು ನ್ಯಾಯಾಂಗದ ಮೇಲೆಯೇ ಕಪ್ಪು ಚುಕ್ಕಿ ಬಿದ್ದಂತಾಗಿದೆ, ಸಣ್ಣ ಪುಟ್ಟ ಅಪರಾಧಿಗಳನ್ನು ಬಂಧಿಸುವ ನ್ಯಾಯಾಲಯ ಬೃಹತ್ ಹಗರಣದಲ್ಲಿ ಭಾಗಿಯಾಗಿರುವವರನ್ನು ಬಂಧಿಸದಿರುವುದು ಎಷ್ಟು ಸರಿ? ಸಾಕಷ್ಟು ಬಾರಿ ವ್ಯವಸ್ಥೆಯ ವಿರುದ್ಧ ರೋಸಿ ಹೋಗಿರುವ ಜನ ಸಾಮಾನ್ಯ ನ್ಯಾಯಾಂಗದ ವಿರುದ್ಧ ಮತ್ತಷ್ಟು ಕೋಪಗೊಂಡಿರುವುದಂತೂ ಸತ್ಯ!
ಕೆಲ ವರ್ಷಗಳ ಹಿಂದೆ ಸೈನ್ಯದಲ್ಲಿ ಸೇವೆ ಸಲ್ಲಿಸಿದ್ದ ಲೆ. ಕರ್ನೆಲ್ ಪುರೋಹಿತ್ ಹಾಗೂ ಸಾಧ್ವಿ ಪ್ರಜ್ಞಾ ಠಾಕೂರ್ ರನ್ನು ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಂಧಿಸಲಾಗಿತ್ತು, ಹಲವು ವರ್ಷಗಳ ತನಿಖೆಯ ನಂತರ ಸಾಧ್ವಿ ನಿರ್ದೋಷಿ ಎಂಬುದು ಸಾಬೀತಾಗಿತ್ತು, ವಿಚಾರಣೆಯ ವೇಳೆಯಲ್ಲಿ ನಾನಾ ತರದ ಮಾನಸಿಕ ಹಾಗೂ ದೈಹಿಕ ಹಲ್ಲೆಗೆ ಒಳಗಾಗಿದ್ದ ಸಂನ್ಯಾಸಿಯೊಬ್ಬರ ಸಹಾಯಕ್ಕೆ ಮುಖವಾಡ ಹಾಕಿಕೊಂಡು ಬೂಟಾಟಿಕೆ ಮಾಡುವ ಯಾವೊಂದು ಸಂಸ್ಥೆಯೂ ಧಾವಿಸಲಿಲ್ಲವೆಂಬುದು ಸರ್ವರಿಗೂ ತಿಳಿದಿದೆ, ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ನಿಷ್ಠಾವಂತ ಅಧಿಕಾರಿಯನ್ನು ಬಂಧಿಸಿದ್ದಾಗ ಆತನ ಕುಟುಂಬದವರು ಪಟ್ಟ ಪಾಡು ಅಷ್ಟಿಷ್ಟಲ್ಲ, ಅಪರಾಧಿಗಳಲ್ಲದವರನ್ನು ಶಿಕ್ಷಿಸುವ ವ್ಯವಸ್ಥೆಯ ವಿರುದ್ಧ ಯಾರಿಗೆ ತಾನೇ ಬೇಸರವಾಗುವುದಿಲ್ಲ ಹೇಳಿ ?? ಸಲ್ಮಾನ್ ಖಾನ್ ಎಂಬ ನಟ ಆಕ್ಸಿಡೆಂಟ್ ಪ್ರಕರಣವೊಂದರಲ್ಲಿ ಸಿಲುಕಿ ಕೊಂಡಿದ್ದ,ಈ ಘಟನೆ ನೆನಿಸಿಕೊಂಡಾಗಲೆಲ್ಲ ಶಂಕರ್ ನಾಗ್ ರವರ ಆಕ್ಸಿಡೆಂಟ್ ಎಂಬ ಸಾಮಾಜಿಕ ಕಳಕಳಿಯುಳ್ಳ ಚಿತ್ರ ಕಣ್ಮುಂದೆ ಪ್ರತ್ಯಕ್ಷವಾಗುತ್ತದೆ, ಹಣ ಬಲ ಹಾಗೂ ಅಧಿಕಾರ ಬಲದಿಂದ ಹೇಗೆ ಒಬ್ಬ ವ್ಯಕ್ತಿ ಕಾನೂನನ್ನು ಮೀರಿ ನಿಲ್ಲಬಲ್ಲ ಎಂಬುದು ಆ ಚಿತ್ರದ ಸಾರಾಂಶವಾಗಿತ್ತು, ಸಲ್ಮಾನ್ ಖಾನ್ ಪ್ರಕರಣದಲ್ಲಿಯೂ ಸಹ ಇದೆ ರೀತಿಯ ಅಭಿಪ್ರಾಯ ಎಲ್ಲೆಡೆ ವ್ಯಕ್ತವಾಗುತ್ತದೆ. ಕೃಷ್ಣ ಮೃಗ ಬೇಟೆ ಪ್ರಕರಣವಿರಬಹುದು ಅಥವಾ ಜೆಸ್ಸಿಕಾ ಕೊಲೆ ಪ್ರಕರಣವಿರಬಹುದು,ಬಹುತೇಕ ಪ್ರಕರಣಗಳಲ್ಲಿ ನ್ಯಾಯ ದೊರೆತಿಲ್ಲದಿರುವುದು ವಿಶ್ವದ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಶೋಭೆ ತರುವಂತಹದಲ್ಲ..

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ